ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇಂಟರ್ನೆಟ್‌ನಲ್ಲಿ ಬೇರೆಯವರ ಖಾಸಗಿ ಚಿತ್ರಗಳು (Photos) ಹಾಗೂ ವಿಡಿಯೋಗಳನ್ನು (Videos) ಅವರ ಅನುಮತಿಯಿಲ್ಲದೆ ವೈರಲ್ ಮಾಡುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಲು ಕರ್ನಾಟಕ ಗೃಹ ಇಲಾಖೆ ಭಾರಿ ಮುಂದಡಿ ಇಟ್ಟಿದೆ. ಯಾವುದೇ ವ್ಯಕ್ತಿಯ ಲಿಖಿತ ಅಥವಾ ಸ್ಪಷ್ಟ ಸಮ್ಮತಿ ಇಲ್ಲದೆ ಅವರ ಖಾಸಗಿ ದೃಶ್ಯಗಳನ್ನು ಪ್ರಕಟಿಸುವುದು ಇನ್ಮುಂದೆ ಕಾನೂನು ಪ್ರಕಾರ ಗಂಭೀರ ಅಪರಾಧವಾಗಲಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ (DG-IGP) ಡಾ. ಎಂ.ಎ. ಸಲೀಂ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು:
ಸಂತ್ರಸ್ತರ ಹಿತರಕ್ಷಣೆ ಮತ್ತು ಸೈಬರ್ ಅಪರಾಧಗಳಿಗೆ ಲಗಾಮು ಹಾಕಲು ಡಿಜಿ-ಐಜಿಪಿ ಹೊರಡಿಸಿರುವ ಗೈಡ್‌ಲೈನ್ಸ್‌ನಲ್ಲಿ ಪ್ರಮುಖ ನಿಯಮಗಳನ್ನು ಉಲ್ಲೇಖಿಸಲಾಗಿದೆ.
ಖಾಸಗಿತನ ಉಲ್ಲಂಘನೆ ಗಂಭೀರ ಅಪರಾಧ: ವ್ಯಕ್ತಿಯ ಅನುಮತಿ ಇಲ್ಲದೆ ಅವರ ಫೋಟೋ ಅಥವಾ ವಿಡಿಯೋ ಶೇರ್ ಮಾಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದು ಕಠಿಣ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ವಿಳಂಬವಿಲ್ಲದೆ ಎಫ್‌ಐಆರ್ ದಾಖಲಿಸಬೇಕು: ಇಂತಹ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಸಬೂಬು ಅಥವಾ ನಾನಾ ಕಾರಣಗಳನ್ನು ನೀಡಿ ಎಫ್‌ಐಆರ್ (FIR) ದಾಖಲು ಮಾಡಲು ವಿಳಂಬ ಮಾಡುವಂತಿಲ್ಲ. ದೂರು ಬಂದ ತಕ್ಷಣವೇ ಕಾನೂನು ಪ್ರಕ್ರಿಯೆ ಆರಂಭಿಸಬೇಕು.
ಬೇಜವಾಬ್ದಾರಿ ಪೊಲೀಸರಿಗೆ ಎಚ್ಚರಿಕೆ: ಸಂತ್ರಸ್ತರು ದೂರು ನೀಡಿದಾಗ ಎಫ್‌ಐಆರ್ ದಾಖಲಿಸಲು ವಿಳಂಬ ಧೋರಣೆ ಅನುಸರಿಸುವ ಅಥವಾ ನಿರ್ಲಕ್ಷ್ಯ ತೋರುವ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಕಠಿಣ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಎಂ.ಎ. ಸಲೀಂ ಅವರು ಆದೇಶದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ;Bengaluru: ಎಟಿಎಂ ವ್ಯಾನ್‌ನಿಂದ ಕೋಟಿ ಕೋಟಿ ರೂ. ದರೋಡೆ ಪ್ರಕರಣ; 9 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
ಸಂತ್ರಸ್ತರಿಗೆ ಶೀಘ್ರ ನ್ಯಾಯದ ಭರವಸೆ:
ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಖಾಸಗಿ ಫೋಟೋಗಳನ್ನು ಲೀಕ್ ಮಾಡುವ ಪ್ರಕರಣಗಳು ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿವೆ. ಇದರಿಂದ ಅನೇಕರು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಶರಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಇಂತಹ ದೂರುಗಳಿಗೆ ತಕ್ಷಣವೇ ಸ್ಪಂದಿಸಿ, ಆರೋಪಿಗಳನ್ನು ಬಂಧಿಸಲು ಮತ್ತು ಆನ್‌ಲೈನ್‌ನಿಂದ ಆ ಕಂಟೆಂಟ್‌ಗಳನ್ನು ಶೀಘ್ರವಾಗಿ ಡಿಲೀಟ್ ಮಾಡಿಸಲು ಸೈಬರ್ ಕ್ರೈಂ ವಿಭಾಗಕ್ಕೆ ವಿಶೇಷ ಸೂಚನೆಗಳನ್ನು ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


