‘ಶಕ್ತಿ’ ಯೋಜನೆಗೆ ಬಿಗ್ ಅಪ್‌ಡೇಟ್!: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ; ವೋಟರ್ ಐಡಿ ಇದ್ದವರಿಗಷ್ಟೇ ಸಿಗಲಿದೆ ಸೌಲಭ್ಯ

ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ದೊಡ್ಡ ಮಟ್ಟದ ಪರಿಷ್ಕರಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಯೋಜನೆ ಜಾರಿಯಾದ ದಿನದಿಂದಲೂ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಬೇರೆ ರಾಜ್ಯಗಳ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಸಾರಿಗೆ ನಿಗಮಗಳಿಗೆ ಆಗುತ್ತಿರುವ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆಯು ‘ಸ್ಮಾರ್ಟ್ ಕಾರ್ಡ್’ (Smart Card) ವಿತರಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ವೋಟರ್ ಐಡಿ ಕಡ್ಡಾಯ: ದುರ್ಬಳಕೆಗೆ ಬೀಳಲಿದೆ ಬ್ರೇಕ್!

ಬೇರೆ ರಾಜ್ಯಗಳ ಮಹಿಳೆಯರು ಉಚಿತವಾಗಿ ಪ್ರಯಾಣಿಸುವುದನ್ನು ತಡೆಯಲು, ಕರ್ನಾಟಕದ ವೋಟರ್ ಐಡಿ (ಮತದಾರರ ಗುರುತಿನ ಚೀಟಿ) ಹೊಂದಿರುವವರಿಗೆ ಮಾತ್ರ ಈ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಫಲಾನುಭವಿಗಳು ತಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆದುಕೊಳ್ಳಬಹುದು. ಈ ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಭಾವಚಿತ್ರ, ಆಧಾರ್ ಸಂಖ್ಯೆ ಮತ್ತು ವಿಳಾಸದ ಸಂಪೂರ್ಣ ವಿವರಗಳಿರುತ್ತವೆ. ಪ್ರಮುಖವಾಗಿ, ಈ ಕಾರ್ಡ್ ಅನ್ನು ಇತರರಿಗೆ ವರ್ಗಾಯಿಸಲು (Transfer) ಅವಕಾಶವಿರುವುದಿಲ್ಲ. ರಾಜ್ಯಾದ್ಯಂತ ಒಟ್ಟು 3 ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ.

ಮೆಟ್ರೋದಲ್ಲೂ ಸಂಚಾರ ಲಭ್ಯ: ಬಿಎಂಟಿಸಿಯಲ್ಲಿ ಮೊದಲ ಪ್ರಯೋಗ!

ಈ ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಯು ಪ್ರಾಯೋಗಿಕವಾಗಿ ಮೊದಲು ಬೆಂಗಳೂರಿನ ಬಿಎಂಟಿಸಿ (BMTC) ವ್ಯಾಪ್ತಿಯಲ್ಲಿ ಜಾರಿಗೆ ಬರಲಿದ್ದು, ತದನಂತರ ಉಳಿದ ಮೂರು ಸಾರಿಗೆ ನಿಗಮಗಳ ಮಹಿಳಾ ಪ್ರಯಾಣಿಕರಿಗೂ ವಿಸ್ತರಿಸಲಾಗುವುದು. ಬಿಎಂಟಿಸಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ 11,000 ಸುಧಾರಿತ ಇಟಿಎಂ (ETM) ಯಂತ್ರಗಳನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಅತ್ಯಾಧುನಿಕ ಎನ್‌ಎಫ್‌ಸಿ (NFC – Near Field Communication) ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಬಸ್ಸುಗಳ ಜೊತೆಗೆ ‘ನಮ್ಮ ಮೆಟ್ರೋ’ (Namma Metro) ಸಂಚಾರಕ್ಕೂ ಇವುಗಳನ್ನು ಬಳಸಲು ಅವಕಾಶ ಕಲ್ಪಿಸಿರುವುದು ವಿಶೇಷ.

ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಸರ್ಜರಿ!: ಯೋಜನೆ ದುರುಪಯೋಗ ಪಡಿಸಿಕೊಳ್ಳುವ ಅನರ್ಹರಿಗೆ ಬಿಗ್ ಶಾಕ್; ಅರ್ಹರಿಗೆ ಮಾತ್ರ ಸಿಗಲಿದೆ ಸೌಲಭ್ಯ

ಉಚಿತ ವಿತರಣೆ: ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಸಂಪೂರ್ಣ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೈಬರ್ ಸೆಂಟರ್‌ಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಡ್‌ಗಳನ್ನು ಪಡೆದುಕೊಳ್ಳಬಹುದು. ಇದಲ್ಲದೆ ರಾಜ್ಯದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲೂ ಸ್ಮಾರ್ಟ್ ಕಾರ್ಡ್ ವಿತರಣಾ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಸರ್ಕಾರದ ಈ ಕಠಿಣ ಕ್ರಮವನ್ನು ಮಹಿಳಾ ಪ್ರಯಾಣಿಕರು ಸ್ವಾಗತಿಸಿದ್ದು, ನಿಜವಾದ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು