ನವದೆಹಲಿ: ಭಾರತೀಯ ವಾಯುಸೇನೆಯಲ್ಲಿ (IAF) ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ, ಶತ್ರುಗಳ ಎದೆನಡುಗಿಸುವ ‘ಜಾಗ್ವಾರ್’ (Jaguar) ಯುದ್ಧ ವಿಮಾನಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಭಾರತ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾಯುಸೇನೆಯ ಸಕ್ರಿಯ ಜಾಗ್ವಾರ್ ಸ್ಕ್ವಾಡ್ರನ್ಗಳ ಹಾರಾಟವನ್ನು ಮುಂದುವರಿಸಲು ಯುನೈಟೆಡ್ ಕಿಂಗ್ಡಮ್ (UK) ದೇಶದ ರಾಯಲ್ ಏರ್ಫೋರ್ಸ್ನಿಂದ ನಿವೃತ್ತಿಗೊಂಡಿರುವ 9 ಜಾಗ್ವಾರ್ ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಮುಂದಾಗಿದೆ.
ಬ್ರಿಟನ್ನಿಂದ ತರಲಾಗುವ ಈ 9 ಅವಳಿ ಇಂಜಿನ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಸೇನೆಯು ಸಕ್ರಿಯ ಹಾರಾಟಕ್ಕೆ ಬಳಸುವುದಿಲ್ಲ. ಬದಲಿಗೆ, ಇವುಗಳನ್ನು ಬಿಚ್ಚಿ (Dismantled) ಇವುಗಳ ಪ್ರಮುಖ ಬಿಡಿಭಾಗಗಳನ್ನು (Spare Parts) ಭಾರತದ ಸಕ್ರಿಯ ವಿಮಾನಗಳಿಗೆ ಬಳಸಿಕೊಳ್ಳಲಾಗುತ್ತದೆ.

ಜಾಗತಿಕವಾಗಿ ಈ ಯುದ್ಧ ವಿಮಾನಗಳ ಉತ್ಪಾದನೆ ಸಂಪೂರ್ಣ ನಿಂತಿರುವುದರಿಂದ ಬಿಡಿಭಾಗಗಳ ತೀವ್ರ ಕೊರತೆ ಎದುರಾಗಿದೆ. ಈ ನಿವೃತ್ತ ವಿಮಾನಗಳಿಂದ ಸಿಗಲಿರುವ ಶಕ್ತಿಶಾಲಿ ಅಡೋರ್ ಇಂಜಿನ್ಗಳು (Adour engines), ಏವಿಯಾನಿಕ್ಸ್ (Avionics), ಲ್ಯಾಂಡಿಂಗ್ ಗೇರ್ ಹಾಗೂ ಹೈಡ್ರಾಲಿಕ್ಸ್ನಂತಹ 150ಕ್ಕೂ ಹೆಚ್ಚು ವಿಭಾಗಗಳ ಪ್ರಮುಖ ಉಪ-ಭಾಗಗಳು ಭಾರತದ ಪ್ರಸ್ತುತ 6 ಜಾಗ್ವಾರ್ ಸ್ಕ್ವಾಡ್ರನ್ಗಳನ್ನು ಇನ್ನೂ ಕೆಲವು ವರ್ಷಗಳ ಕಾಲ ಆಕಾಶದಲ್ಲಿ ಸಕ್ರಿಯವಾಗಿಡಲು ನೆರವಾಗಲಿವೆ.
ಇದನ್ನೂ ಓದಿ; Trending: ಆಪರೇಷನ್ ಸಿಂದೂರ ಕಾರ್ಯಾಚರಣೆ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ
ಭಾರತದ ಹೆಮ್ಮೆಯ ‘ಶಂಶೇರ್’:
ಭಾರತೀಯ ವಾಯುಸೇನೆಯು ಪ್ರಸ್ತುತ ಸರಿಸುಮಾರು 120 ಸಕ್ರಿಯ ಜಾಗ್ವಾರ್ ವಿಮಾನಗಳನ್ನು ಹೊಂದಿದ್ದು, ಇವುಗಳಿಗೆ ಸ್ಥಳೀಯವಾಗಿ ‘ಶಂಶೇರ್’ (ನ್ಯಾಯದ ಕತ್ತಿ) ಎಂದು ಹೆಸರಿಡಲಾಗಿದೆ. ಶತ್ರು ದೇಶಗಳ ರಡಾರ್ ಕಣ್ಣು ತಪ್ಪಿಸಿ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿ, ನಿಖರ ದಾಳಿ (Deep Precision Strikes) ನಡೆಸುವಲ್ಲಿ ಮತ್ತು ಪರಮಾಣು ಬಾಂಬ್ಗಳನ್ನು ಹೊತ್ತೊಯ್ಯುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ. ವಿಶೇಷವೆಂದರೆ, ಬ್ರಿಟನ್, ಫ್ರಾನ್ಸ್ ಮತ್ತು ಓಮನ್ ದೇಶಗಳು ಈಗಾಗಲೇ ಈ ವಿಮಾನಕ್ಕೆ ನಿವೃತ್ತಿ ಘೋಷಿಸಿದ್ದು, ಜಾಗತಿಕವಾಗಿ ಈ ಬಲಿಷ್ಠ ಜಾಗ್ವಾರ್ ಯುದ್ಧ ವಿಮಾನಗಳನ್ನು ಬಳಸುತ್ತಿರುವ ಕೊನೆಯ ಏಕೈಕ ದೇಶ ಭಾರತ ಮಾತ್ರವಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

