ಬೆಂಗಳೂರು : ಇತ್ತೀಚೆಗಷ್ಟೇ ನಡೆದ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಗೊಂದಲಗಳಿಂದ ಕಂಗಾಲಾಗಿದ್ದ ಕರ್ನಾಟಕ ಬಿಜೆಪಿಗೆ ಸೋಮವಾರ ಮತ್ತೊಂದು ಭಾರಿ ಆಘಾತ ಎದುರಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ (ಕಿಕ್ ಔಟ್) ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕೇಸರಿ ಪಡೆಯಲ್ಲಿ ತಲ್ಲಣ ಸೃಷ್ಟಿಸಿದೆ.
ವೈರಲ್ ಆಡಿಯೋದಲ್ಲಿ ಏನಿದೆ?:

ವೈರಲ್ ಆಗಿರುವ ಆಡಿಯೋದಲ್ಲಿ ಸದಾನಂದ ಗೌಡರದ್ದು ಎನ್ನಲಾದ ಧ್ವನಿಯು ಅಪರಿಚಿತ ವ್ಯಕ್ತಿಯೊಬ್ಬರ ಜೊತೆ (ಪ್ರದೀಪ್ ಜಿ ಎಂದು ಕರೆಯಲಾಗುವ ವ್ಯಕ್ತಿ) ಸಂಭಾಷಣೆ ನಡೆಸುತ್ತಿರುವುದು ಕೇಳಿಬಂದಿದೆ. ಅದರಲ್ಲಿ, “ಅವರು (ವಿಜಯೇಂದ್ರ) ನವೆಂಬರ್ ವೇಳೆಗೆ ರಾಜ್ಯಾಧ್ಯಕ್ಷರಾಗಿ 3 ವರ್ಷ ಪೂರೈಸಲಿದ್ದಾರೆ. ಮತ್ತೊಂದು ಗೊಂದಲ ಯಾಕೆ ಸೃಷ್ಟಿಸಬೇಕು? ಇನ್ನೆರಡು ತಿಂಗಳು ಇದನ್ನು ಹೀಗೆಯೇ ತಳ್ಳಿ ಅವರನ್ನು ಹೊರಗೆ ಹಾಕಬೇಕು. ಆಗ ಅವರ ಅವಧಿಯೂ ಮುಗಿಯುವುದರಿಂದ ಯಾರೂ ದೂರು ನೀಡಲು ಸಾಧ್ಯವಿಲ್ಲ ಮತ್ತು ಪಕ್ಷದಲ್ಲೂ ಗೊಂದಲ ಇರುವುದಿಲ್ಲ. ಜುಲೈ, ಆಗಸ್ಟ್, ಸೆಪ್ಟೆಂಬರ್ ದಾಟಿಸಿ… ಅಕ್ಟೋಬರ್‌ನಲ್ಲಿ ಅವರನ್ನು ಕಿಕ್ ಔಟ್ (ಹೊರಗೆ ಹಾಕಿ) ಮಾಡಿ” ಎಂದು ಆಡಿಯೋದಲ್ಲಿ ಹೇಳಲಾಗಿದೆ.
“ಇದು ನಕಲಿ ಆಡಿಯೋ” – ಸದಾನಂದ ಗೌಡ ನಿರಾಕರಣೆ
“ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಸಂಪೂರ್ಣ ನಕಲಿ (Fake). ಅದರಲ್ಲಿರುವ ಧ್ವನಿ ನನ್ನದಲ್ಲ. ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನಗಲ್ಲದ ಆಡಿಯೋ ಅಥವಾ ವಿಡಿಯೋಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಮಾಧ್ಯಮಗಳೇ ಇದರ ಸತ್ಯಾಸತ್ಯತೆಯನ್ನು ಕಂಡುಹಿಡಿಯಬೇಕು. ಇದು ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿರುವ ಧ್ವನಿಯೇ ಅಥವಾ ಬೇರೇನಾದರೂ ತಂತ್ರವೇ ಎಂಬುದನ್ನು ತನಿಖೆ ಮಾಡಬೇಕು. ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಬಾರದು, ರಾಷ್ಟ್ರೀಯ ನಾಯಕರು ಕೇಳಿದರೆ ಮಾತ್ರ ನಾನು ಉತ್ತರಿಸುತ್ತೇನೆ ಎಂದಿದ್ದಾರೆ.ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಅಡ್ಡ ಮತದಾನ ಮಾಡಿದ ವಿವಾದದ ಬೆನ್ನಲ್ಲೇ ಈ ಆಡಿಯೋ ಲೀಕ್ ಆಗಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

