ಪತ್ನಿಯರೇ ಗಮನಿಸಿ; ಗಂಡನಿಗಿಂತ ಹೆಂಡತಿ ಸಂಬಳ ಹೆಚ್ಚಿದ್ರೆ ಜೀವನಾಂಶ ಇಲ್ಲ!: ಕೇವಲ ‘ಮಹಿಳೆ’ ಎಂಬ ಕಾರಣಕ್ಕೆ ಹಣ ನೀಡಲು ಆದೇಶಿಸಬೇಡಿ ಎಂದ ಕರ್ನಾಟಕ ಹೈಕೋರ್ಟ್!

ಬೆಂಗಳೂರು: ವೈವಾಹಿಕ ವಿವಾದಗಳಲ್ಲಿ ಜೀವನಾಂಶ ಮಂಜೂರು ಮಾಡುವ ಕುರಿತು ಕರ್ನಾಟಕ ಹೈಕೋರ್ಟ್‌ ಅತ್ಯಂತ ಮಹತ್ವದ ಮತ್ತು ದಿಕ್ಸೂಚಿ ತೀರ್ಪೊಂದನ್ನು ನೀಡಿದೆ. “ಪತಿಗಿಂತ ಪತ್ನಿಯೇ ಹೆಚ್ಚಿನ ಸಂಬಳ ಪಡೆಯುತ್ತಿದ್ದು, ಆಕೆಗೆ ಯಾವುದೇ ಆರ್ಥಿಕ ಹೊಣೆಗಾರಿಕೆಗಳಿಲ್ಲದಿದ್ದರೆ ಆಕೆಗೆ ಜೀವನಾಂಶ ನೀಡಲು ಪತಿ ಬಾಧ್ಯಸ್ಥನಲ್ಲ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೇವಲ ಮಹಿಳೆ ಅಥವಾ ಪತ್ನಿ ಎಂಬ ಏಕೈಕ ಕಾರಣಕ್ಕೆ ಸಾಂಪ್ರದಾಯಿಕ ಪದ್ಧತಿಯಂತೆ ಪತಿಯೇ ಆಕೆಯನ್ನು ಸಾಕಬೇಕು ಎಂಬ ಧೋರಣೆಯಡಿ ಕೆಳಹಂತದ ನ್ಯಾಯಾಲಯಗಳು ನೇರವಾಗಿ ಜೀವನಾಂಶದ ಆದೇಶ ಹೊರಡಿಸಬಾರದು ಎಂದು ಹೈಕೋರ್ಟ್ ಕಿವಿಮಾತು ಹೇಳಿದೆ.

ಇದನ್ನೂ ಓದಿ:

ತಿಂಗಳಿಗೆ 1 ಲಕ್ಷ ಗಳಿಸುವ ಪತ್ನಿ; 60 ಸಾವಿರ ಪಡೆಯುವ ಪತಿ!:

ಈ ಪ್ರಕರಣದ ಹಿನ್ನೆಲೆಯು ಇಂತಿದೆ: 2024 ರಲ್ಲಿ ವಿವಾಹವಾಗಿದ್ದ ದಂಪತಿಗಳು ವೈಮನಸ್ಸಿನ ಕಾರಣದಿಂದ ಕೇವಲ ಕೆಲವೇ ತಿಂಗಳುಗಳಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಈ ವೇಳೆ ಪತ್ನಿಯು ತನ್ನ ಜೀವನ ನಿರ್ವಹಣೆಗಾಗಿ ಜೀವನಾಂಶ ಕೋರಿ ಮೈಸೂರಿನ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯನ್ನು ಆಲಿಸಿದ್ದ ಕೆಳಹಂತದ ಕೋರ್ಟ್, ಪತ್ನಿಗೆ ಪ್ರತಿ ತಿಂಗಳು 20,000 ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಪೀಠವು ದಂಪತಿಗಳಿಬ್ಬರ ಆರ್ಥಿಕ ಅಫಿಡವಿಟ್ ಅನ್ನು ಕೂಲಂಕಷವಾಗಿ ಪರಿಶೀಲಿಸಿತು. ಈ ವೇಳೆ ಪತಿಯ ಮಾಸಿಕ ಸಂಬಳ 60,646 ರೂಪಾಯಿ ಆಗಿದ್ದರೆ, ಪತ್ನಿಯು ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿರುವುದು ದೃಢಪಟ್ಟಿತು. ಅಂದರೆ ಪತಿಗಿಂತ ಪತ್ನಿಯೇ ಸುಮಾರು 40 ಸಾವಿರ ರೂಪಾಯಿ ಹೆಚ್ಚು ಗಳಿಸುತ್ತಿದ್ದರು.

ಇದನ್ನೂ ಓದಿ:High Court : ಸೆಷನ್ ಕೋರ್ಟ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ : ಹೈಕೋರ್ಟ್

ಹೈಕೋರ್ಟ್ ನೀಡಿದ ಪ್ರಮುಖ ತಾರ್ಕಿಕ ಅಂಶಗಳು:

ಸ್ವಾವಲಂಬನೆ ಮತ್ತು ಸಾಮರ್ಥ್ಯ: ಪತ್ನಿಯು ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸುತ್ತಿರುವುದರಿಂದ ಆಕೆ ತನ್ನ ಜೀವನ ನಿರ್ವಹಣೆಯನ್ನು ತಾನೇ ಅತ್ಯಂತ ಸುಲಭವಾಗಿ ಮಾಡಿಕೊಳ್ಳಲು ಶಕ್ತಳಾಗಿದ್ದಾಳೆ.

ಆರ್ಥಿಕ ಹೊಣೆಗಾರಿಕೆಗಳಿಲ್ಲದಿರುವುದು: ಸದ್ಯಕ್ಕೆ ಪತ್ನಿಗೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಅಥವಾ ಇತರ ಯಾವುದೇ ದೊಡ್ಡ ಮಟ್ಟದ ಆರ್ಥಿಕ ಹೊಣೆಗಾರಿಕೆಗಳು (Liabilities) ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿತು.

ಸಾಲದ ಸುಳ್ಳು ವಾದಕ್ಕೆ ಬಿತ್ತು ಬ್ರೇಕ್: ಮದುವೆಗಾಗಿ ತಾನು ಸಾಲ ಮಾಡಿದ್ದು, ಇಎಂಐ (EMI) ಕಟ್ಟಬೇಕಿದೆ ಎಂದು ಪತ್ನಿ ವಾದಿಸಿದ್ದರು. ಆದರೆ ಅದಕ್ಕೆ ಪೂರಕವಾದ ಯಾವುದೇ ಬ್ಯಾಂಕ್ ಅಥವಾ ಸಾಲದ ದಾಖಲೆಗಳನ್ನು ಕೋರ್ಟ್‌ಗೆ ಒದಗಿಸಲು ಆಕೆ ವಿಫಲರಾಗಿದ್ದರು.

ಪತಿಯ ಆದಾಯವೇ ಕಡಿಮೆ: ಪತಿಯ ಸಂಬಳವೇ ಪತ್ನಿಗಿಂತ ತೀರಾ ಕಡಿಮೆ ಇರುವಾಗ, ಆತನ ಗಳಿಕೆಯಿಂದ 20,000 ರೂಪಾಯಿಗಳನ್ನು ಪತ್ನಿಯ ನಿರ್ವಹಣೆಗೆ ನೀಡಲು ಆದೇಶಿಸುವುದು ಕಾನೂನುಬಾಹಿರ ಮತ್ತು ತರ್ಕಬದ್ಧವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

“ಯಾವಾಗ ಪತ್ನಿಯು ಪತಿಯ ಜೀವನಮಟ್ಟಕ್ಕೆ ತಕ್ಕಂತೆ ತನ್ನನ್ನು ತಾನು ನಿರ್ವಹಿಸಿಕೊಳ್ಳಲು ಯಾವುದೇ ಆರ್ಥಿಕ ಮೂಲವನ್ನು ಹೊಂದಿರುವುದಿಲ್ಲವೋ, ಅಂತಹ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಗಳು ಜೀವನಾಂಶವನ್ನು ಮಂಜೂರು ಮಾಡಬೇಕು. ಆದರೆ ಪತ್ನಿಯೇ ಆರ್ಥಿಕವಾಗಿ ಸದೃಢವಾಗಿದ್ದಾಗ ಈ ನಿಯಮ ಅನ್ವಯಿಸುವುದಿಲ್ಲ” ಎಂದು ನ್ಯಾ. ಚಿಲ್ಲಕೂರ್ ಸುಮಲತಾ ಆದೇಶಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ನೀಡಿದ್ದ 20 ಸಾವಿರ ರೂಪಾಯಿ ಜೀವನಾಂಶದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಪತಿಯ ಅರ್ಜಿಯನ್ನು ಪುರಸ್ಕರಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ