ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನೀಡಿದ 191 ರನ್‌ಗಳ ಕಠಿಣ ಗುರಿಯನ್ನು ಇಂಗ್ಲೆಂಡ್ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ ತಲುಪಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದ ಮುನ್ನಡೆ ಸಾಧಿಸಿದೆ.
ಭಾರತಕ್ಕೆ ಉತ್ತಮ ಆರಂಭ; ತಿಲಕ್ ವರ್ಮಾ ಅಬ್ಬರ:

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಚೊಚ್ಚಲ ಪಂದ್ಯವಾಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 50 ರನ್ ಪೇರಿಸಿದ ಬಳಿಕ ಸೂರ್ಯವಂಶಿ (14) ಔಟಾದರು. ನಂತರ ಅಭಿಷೇಕ್ ಶರ್ಮಾ ಬಿರುಸಿನ 43 ರನ್ (24 ಎಸೆತ) ಬಾರಿಸಿ ಪವರ್‌ಪ್ಲೇನಲ್ಲಿ ತಂಡದ ಸ್ಕೋರ್ 65ಕ್ಕೆ ತಲುಪಿಸಿದರು.
ನಾಯಕ ಶ್ರೇಯಸ್ ಅಯ್ಯರ್ 37 ರನ್ (22 ಎಸೆತ) ಕಾಣಿಕೆ ನೀಡಿದರು. ಆದರೆ, ಇಶಾನ್ ಕಿಶನ್ 49 ರನ್ ಗಳಿಸಲು 40 ಎಸೆತಗಳನ್ನು ತೆಗೆದುಕೊಂಡಿದ್ದರಿಂದ ಭಾರತದ ರನ್ ವೇಗ ಕುಂಠಿತವಾಯಿತು. ಶಿವಂ ದುಬೆ (5) ಹಾಗೂ ಅಕ್ಷರ್ ಪಟೇಲ್ (2) ನಿರಾಸೆ ಮೂಡಿಸಿದರು. ಕೊನೆಯ ಓವರ್‌ನಲ್ಲಿ ತಿಲಕ್ ವರ್ಮಾ, ಜೋಫ್ರಾ ಆರ್ಚರ್ ಎಸೆತಗಳಿಗೆ ಬ್ಯಾಕ್-ಟು-ಬ್ಯಾಕ್ ಸಿಕ್ಸರ್ ಹಾಗೂ ಬೌಂಡರಿ ಚಚ್ಚಿ ತಂಡದ ಸ್ಕೋರ್ ಅನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್‌ಗಳಿಗೆ ತಲುಪಿಸಿದರು.
ಇದನ್ನೂ ಓದಿ: ಕ್ರಿಕೆಟ್ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ! ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೇ ದಾಖಲೆ ಉಡೀಸ್
ಆರಂಭಿಕ ಆಘಾತದಿಂದ ಇಂಗ್ಲೆಂಡ್ ಪಾರು:
191 ರನ್‌ಗಳ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಭಾರತದ ವೇಗಿ ಅರ್ಷದೀಪ್ ಸಿಂಗ್ ಮೊದಲ ಓವರ್‌ನಲ್ಲೇ ಡಬಲ್ ಶಾಕ್ ನೀಡಿದರು. ಫಿಲ್ ಸಾಲ್ಟ್ (0) ಹಾಗೂ ಜೋಸ್ ಬಟ್ಲರ್ (0) ಇಬ್ಬರನ್ನೂ ಶೂನ್ಯಕ್ಕೆ ಔಟ್ ಮಾಡಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಹ್ಯಾರಿ ಬ್ರೂಕ್ ಕೇವಲ 15 ಎಸೆತಗಳಲ್ಲಿ 39 ರನ್ ಸಿಡಿಸಿ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು.
ಬ್ರೂಕ್ ಔಟಾದ ಬಳಿಕ ಟಾಮ್ ಬ್ಯಾಂಟನ್ (39) ಹಾಗೂ ಜೇಕಬ್ ಬೆಥೆಲ್ ಜೋಡಿ ಇಂಗ್ಲೆಂಡ್ ಸ್ಕೋರ್ ಅನ್ನು 100ರ ಗಡಿ ದಾಟಿಸಿತು. ವಿಲ್ ಜ್ಯಾಕ್ಸ್ (9) ಬೇಗನೇ ಔಟಾದರೂ ಬೆಥೆಲ್ ಕ್ರೀಸ್ ಕಚ್ಚಿ ನಿಂತು ಭಾರತೀಯ ಬೌಲರ್‌ಗಳನ್ನು ದಂಡಿಸಿದರು.
ಬಿಷ್ಣೋಯ್ ಓವರ್‌ನಲ್ಲಿ ಟರ್ನಿಂಗ್ ಪಾಯಿಂಟ್, ಬೆಥೆಲ್ ಮ್ಯಾಚ್ ವಿನ್ನರ್:
ಕೊನೆಯ 5 ಓವರ್‌ಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 59 ರನ್‌ಗಳ ಅವಶ್ಯಕತೆಯಿತ್ತು. ಆದರೆ 17ನೇ ಓವರ್ ಎಸೆದ ಭಾರತದ ಸ್ಪಿನ್ನರ್ ರವಿ ಬಿಷ್ಣೋಯ್ ಬರೋಬ್ಬರಿ 29 ರನ್ ಬಿಟ್ಟುಕೊಟ್ಟಿದ್ದು ಪಂದ್ಯದ ಗತಿಯನ್ನೇ ಬದಲಿಸಿತು. ಇಂಗ್ಲೆಂಡ್ ಗೆಲುವು ಸುಲಭವಾಯಿತು.
ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೇಕಬ್ ಬೆಥೆಲ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 76 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್ 19 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿ ಜಯಭೇರಿ ಬಾರಿಸಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

