ಬೀಜಿಂಗ್: ಭೀಕರ ಮಳೆ ಹಾಗೂ ಪ್ರವಾಹದ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿರುವ ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಈಗ ಜನರಿಗೆ ‘ಹಾವಿನ ಕಾಟ’ ಶುರುವಾಗಿದೆ. ಪ್ರವಾಹದ ಭೀಕರತೆಗೆ ಸ್ಥಳೀಯ ಹಾವಿನ ಸಾಕಾಣಿಕಾ ಕೇಂದ್ರಗಳಿಂದ (Snake Breeding Farms) 900ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ತಪ್ಪಿಸಿಕೊಂಡು ಪ್ರವಾಹದ ನೀರಿನಲ್ಲಿ ತೇಲಿ ಬರುತ್ತಿದ್ದು, ಇಡೀ ಪ್ರಾಂತ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಚೀನಾದ ಗ್ಲೋಬಲ್ ಟೈಮ್ಸ್ ಹಾಗೂ ಸಿಸಿಟಿವಿ ಮಾಧ್ಯಮಗಳ ವರದಿಯ ಪ್ರಕಾರ, ಹೀಗೆ ತಪ್ಪಿಸಿಕೊಂಡಿರುವ ಹಾವುಗಳಲ್ಲಿ ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ‘ನಾಗರಹಾವುಗಳು’ (Cobras) ಸೇರಿವೆ. ಸದ್ಯ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಈ ಹಾವುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಗುವಾಂಗ್ಕ್ಸಿ ಪ್ರಾಂತ್ಯದ ಹೆಂಗ್ಝೌ ನಗರದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಹಾವೊಂದು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಹಾವಿನ ಕಡಿತಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ, ಪ್ರವಾಹದಿಂದಾಗಿ ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದವು. ಇದರಿಂದಾಗಿ ಆಸ್ಪತ್ರೆ ತಲುಪುವುದು ತಡವಾಗಿ ಮಹಿಳೆ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಹಾವುಗಳ ಹಾವಳಿ ಹೆಚ್ಚಾಗಿರುವುದರಿಂದ, ಹಾವಿನ ಕಡಿತಕ್ಕೆ ತಕ್ಷಣವೇ ಚಿಕಿತ್ಸೆ ನೀಡಲು ಪ್ರವಾಹ ಪೀಡಿತ ಪ್ರದೇಶಗಳಲ್ಲೇ ತಾತ್ಕಾಲಿಕ ವೈದ್ಯಕೀಯ ಕ್ಲಿನಿಕ್ಗಳನ್ನು ತೆರೆಯಲಾಗಿದೆ. ಹಾಗೂ ಹಾವುಗಳನ್ನು ಹಿಡಿಯಲು ವಿಶೇಷ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
📌 Hengzhou, #China 🇨🇳 July 6 /2026
After days of heavy rain 🌧️ and flooding across China, around 900 snakes 🐍 escaped from a breeding farm in Hengzhou. Reports say the reptiles included venomous cobras, with villagers attempting to catch them in the floodwaters. pic.twitter.com/cTcgAZ4nZd— CAUGHTIN4KHQ (@CaughtIn4KHQ) July 9, 2026
ಗುವಾಂಗ್ಕ್ಸಿ ಪ್ರಾಂತ್ಯವು ಚೀನಾದಲ್ಲೇ ಅತಿ ದೊಡ್ಡ ವಾಣಿಜ್ಯ ಹಾವಿನ ಸಾಕಾಣಿಕಾ ಕೇಂದ್ರವಾಗಿದೆ. ಇಲ್ಲಿ ಚೀನಿ ಸಾಂಪ್ರದಾಯಿಕ ಔಷಧಗಳು, ಚರ್ಮದ ಉತ್ಪನ್ನಗಳು ಮತ್ತು ಮಾಂಸದ ಉದ್ಯಮಕ್ಕಾಗಿ ಸುಮಾರು 3 ಕೋಟಿಗೂ ಹೆಚ್ಚು ಹಾವುಗಳನ್ನು ಕೃತಕವಾಗಿ ಸಾಕಿ ಬೆಳೆಸಲಾಗುತ್ತದೆ. ಆದರೆ ಪ್ರವಾಹಕ್ಕೆ ಹೆಂಗ್ಝೌ ನಗರದ ಹತ್ತಾರು ಹಳ್ಳಿಗಳು ಮುಳುಗಡೆಯಾಗುತ್ತಿದ್ದಂತೆ, ಫಾರ್ಮ್ಗಳಲ್ಲಿದ್ದ ನೂರಾರು ಹಾವುಗಳು ನೇರವಾಗಿ ಪ್ರವಾಹದ ನೀರು ಸೇರಿಕೊಂಡಿವೆ.
ಚೀನಾದ ಈ ಭೀಕರ ಚಂಡಮಾರುತ ಮತ್ತು ಪ್ರವಾಹಕ್ಕೆ ಇದುವರೆಗೆ 6 ಜನರು ಸಾವನ್ನಪ್ಪಿದ್ದು, 1.30 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಕ್ಕಾಗಿ 5,700ಕ್ಕೂ ಹೆಚ್ಚು ಬೋಟ್ಗಳನ್ನು ಬಳಸಲಾಗುತ್ತಿದೆ.
ಪ್ರವಾಹದ ಅಬ್ಬರ ಎಷ್ಟು ಭೀಕರವಾಗಿದೆ ಎಂದರೆ, ಸ್ಥಳೀಯ ಮೃಗಾಲಯದ ತಡೆಗೋಡೆಗಳು ಧ್ವಂಸಗೊಂಡು ಅಲ್ಲಿಂದ ಜೀಬ್ರಾಗಳು, ಮಿನಿ ಹಂದಿಗಳು ಹಾಗೂ ಅಲ್ಪಾಕಾಗಳು ಸೇರಿದಂತೆ 100ಕ್ಕೂ ಹೆಚ್ಚು ಅಪರೂಪದ ಪ್ರಾಣಿಗಳು ನಾಪತ್ತೆಯಾಗಿವೆ. ಜೊತೆಗೆ ನೂರಾರು ಹಂದಿ ಸಾಕಾಣಿಕಾ ಕೇಂದ್ರಗಳು ಹಾಗೂ ಮಲ್ಲಿಗೆ ತೋಟಗಳು ಸಂಪೂರ್ಣ ನಾಶವಾಗಿವೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

