ಕಡಬ: ಯುವತಿಯೊಬ್ಬರ ಮದುವೆ ವಿಚಾರಕ್ಕೆ ಸಂಬಂಧಿಸಿದ ವಿವಾದ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದ ಮಟ್ಟಕ್ಕೆ ತಲುಪಿದ ಘಟನೆ ಕಡಬದಲ್ಲಿ ನಡೆದಿದ್ದು, ಎರಡೂ ಕಡೆಯಿಂದ ನೀಡಲಾದ ದೂರುಗಳ ಆಧಾರದ ಮೇಲೆ ಕಡಬ ಪೊಲೀಸರು ಪರಸ್ಪರ ಎರಡು ಪ್ರಕರಣಗಳನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಡಬ ನಿವಾಸಿ ಮೋನಿಶ್ (21) ಅವರು ನೀಡಿದ ದೂರಿನಲ್ಲಿ, ಜುಲೈ 10ರ ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಕಡಬ ಕಾಲೇಜು ರಸ್ತೆ ಜಂಕ್ಷನ್ ಸಮೀಪ ಶರತ್, ದೀಪಕ್ ಹಾಗೂ ವಿಶ್ವನಾಥ್ ತಡೆದು ನಿಲ್ಲಿಸಿ, ಯುವತಿಯೊಬ್ಬರ ಮದುವೆ ವಿಚಾರವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.84/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ: ರೋಗಿ ರೆಫರ್ ಮಾಡುವ ಮೊದಲು ಲಭ್ಯತೆ ಪರಿಶೀಲಿಸಲು ಸೂಚನೆ
ಇದಕ್ಕೆ ಪ್ರತಿಯಾಗಿ ಕುತ್ರುಪಾಡಿ ನಿವಾಸಿ ದೀಪಕ್ (33) ಅವರು ಸಹ ಪ್ರತಿದೂರು ಸಲ್ಲಿಸಿದ್ದು, ಮೋನಿಶ್ ತಮಗೆ ದಾರಿ ತಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಕ್ರೈಂ ನಂ.85/2026ರಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ಎರಡೂ ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದ್ದು, ತನಿಖೆಯ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

