ಮುಂಬೈ: ಚಿತ್ರರಂಗದ ಮತ್ತೊಂದು ಸುಂದರ ಜೋಡಿ ಅಧಿಕೃತವಾಗಿ ಬೇರ್ಪಟ್ಟಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ನಿರ್ದೇಶಕ ಹಾಗೂ ನಟ ಆದಿನಾಥ್ ಕೊಠಾರೆ ಮತ್ತು ಅವರ ಪತ್ನಿ, ಜನಪ್ರಿಯ ನಟಿ ಊರ್ಮಿಳಾ ಕಾನಿಟ್ಕರ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಸೌಹಾರ್ದಯುತವಾಗಿ ವಿದಾಯ ಹೇಳಿದ್ದಾರೆ. ಗುರುವಾರ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ತಾವು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಖಚಿತಪಡಿಸಿದ್ದಾರೆ.
ತಮ್ಮ ವಿಚ್ಛೇದನದ ನಿರ್ಧಾರದ ಕುರಿತು ಅಭಿಮಾನಿಗಳು ಹಾಗೂ ಮಾಧ್ಯಮಗಳಿಗೆ ತಿಳಿಸಲು ಇಬ್ಬರೂ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಜಂಟಿ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ.
“ನಮ್ಮ ಹಿತೈಷಿಗಳು, ಸ್ನೇಹಿತರು ಹಾಗೂ ಮಾಧ್ಯಮ ಮಿತ್ರರ ಗಮನಕ್ಕೆ… ಸಾಕಷ್ಟು ಯೋಚಿಸಿದ ಬಳಿಕ ನಾವು (ಆದಿನಾಥ್ ಎಂ ಕೊಠಾರೆ ಮತ್ತು ಊರ್ಮಿಳಾ ಕಾನಿಟ್ಕರ್) ದಂಪತಿಗಳಾಗಿ ಬೇರೆಯಾಗಲು ಒಮ್ಮತದಿಂದ ತೀರ್ಮಾನಿಸಿದ್ದೇವೆ. ಗಂಡ-ಹೆಂಡತಿಯಾಗಿ ನಮ್ಮ ಸುದೀರ್ಘ ಪಯಣ ಇಲ್ಲಿಗೆ ಮುಗಿದಿದ್ದರೂ, ಮಗಳು ಜಿಝಾಳ ಮೇಲಿನ ನಮ್ಮ ಜವಾಬ್ದಾರಿ ಹಾಗೇ ಇರಲಿದೆ. ಅವಳೇ ನಮ್ಮ ಮೊದಲ ಆದ್ಯತೆ. ಅವಳು ಯಾವುದೇ ಪ್ರೀತಿ ಮತ್ತು ಭದ್ರತೆಯ ಕೊರತೆಯಿಲ್ಲದೆ ಬೆಳೆಯಲು ನಾವು ಜಂಟಿ ಪೋಷಕರಾಗಿ (Co-parenting) ಸಮರ್ಪಣಾಭಾವದಿಂದ ಜೊತೆಯಾಗಿ ಮುಂದುವರಿಯುತ್ತೇವೆ.”
ಮುಂದುವರಿದು ಮಾತನಾಡಿದ ಅವರು, “ಇಷ್ಟು ವರ್ಷಗಳ ಕಾಲ ನಿಮ್ಮಿಂದ ಸಿಕ್ಕ ಪ್ರೀತಿ ಹಾಗೂ ಬೆಂಬಲಕ್ಕೆ ನಾವು ಚಿರಋಣಿ. ಈ ಕಠಿಣ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆ ತರದಂತೆ ಗೌರವಿಸಬೇಕಾಗಿ ವಿನಂತಿಸುತ್ತೇವೆ. ಈ ವಿಷಯದ ಬಗ್ಗೆ ಇದೇ ನಮ್ಮ ಕೊನೆಯ ಹೇಳಿಕೆಯಾಗಿದ್ದು, ಮುಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ತಿಳಿಸಿದ್ದಾರೆ. ಆದಿನಾಥ್ ಮತ್ತು ಊರ್ಮಿಳಾ 2011ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗೆ ಜಿಝಾ ಎಂಬ ಮುದ್ದಾದ ಮಗಳಿದ್ದಾಳೆ.
ಆದಿನಾಥ್ ಕೊಠಾರೆ ಅವರು 2019 ರಲ್ಲಿ ತೆರೆಕಂಡ ‘ಪಾನಿ’ ಎಂಬ ಚಿತ್ರವನ್ನು ನಿರ್ದೇಶಿಸಿ ದೇಶದ ಪ್ರತಿಷ್ಠಿತ ‘ರಾಷ್ಟ್ರ ಪ್ರಶಸ್ತಿ’ ಮುಡಿಗೇರಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರೇ ಹೀರೊ ಆಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ರಣಬೀರ್ ಕಪೂರ್ ಮತ್ತು ಯಶ್ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ರಾಮಾಯಣ’ದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ವಿನೀತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಮ್ಯಾರೇಜ್ ಪಾರ್ಟಿ’ ಫಸ್ಟ್ ಲುಕ್ ಪೋಸ್ಟರ್ ಔಟ್
ಊರ್ಮಿಳಾ ಕಾನಿಟ್ಕರ್ ಅವರು ಮರಾಠಿ ಚಿತ್ರರಂಗದ ಪ್ರತಿಭಾವಂತ ನಟಿಯಾಗಿದ್ದು, ‘ಮಲಾ ಆಯಿ ವ್ಹಾಯ್ಚಿ!’, ‘ಆಟೋಗ್ರಾಫ್’, ‘ದುನಿಯಾದಾರಿ’ ಹಾಗೂ ‘ಪ್ಯಾರ್ ವಾಲಿ ಲವ್ ಸ್ಟೋರಿ’ ಸೇರಿದಂತೆ ಹಲವು ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.
ಚಿತ್ರರಂಗದಲ್ಲಿ ಮಾದರಿ ಜೋಡಿಯಾಗಿದ್ದ ಇವರು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಸದ್ದಿಲ್ಲದೆ ದೂರವಾಗಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

