ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಾರಿ ಜನದಟ್ಟಣೆ: ಉಸಿರುಗಟ್ಟಿ ವೃದ್ಧ ಸಾವು; 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ನ್ಯೂ ಡೆಹಲಿ: ಒಡಿಶಾದ ಪುರಿಯಲ್ಲಿ ಗುರುವಾರ ಅತ್ಯಂತ ಸಡಗರದಿಂದ ಆರಂಭವಾದ ಐತಿಹಾಸಿಕ ಜಗನ್ನಾಥ ರಥಯಾತ್ರೆಯ ಮಹೋತ್ಸವದ ವೇಳೆ ಭಾರಿ ಜನದಟ್ಟಣೆ (Crowd Surge) ಉಂಟಾಗಿದೆ. ಲಕ್ಷಾಂತರ ಭಕ್ತರು ಜಮಾಯಿಸಿದ್ದ ಬಡಾ ದಂಡಾ (ಗ್ರಾಂಡ್ ರೋಡ್) ಮಾರ್ಗದಲ್ಲಿ ಉಂಟಾದ ತೀವ್ರ ಒತ್ತಡದಿಂದಾಗಿ ಉಸಿರುಗಟ್ಟಿ ಒಬ್ಬರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ.

ರಥೋತ್ಸವದ ಮೆರವಣಿಗೆ ಸಾಗುತ್ತಿದ್ದ ವೇಳೆ ಏಕಾಏಕಿ ನೂಕುನುಗ್ಗಲು ಉಂಟಾಗಿದ್ದು, ಸುಮಾರು 7 ಮಂದಿ ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದುಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸುಮಾರು 60 ವರ್ಷ ಪ್ರಾಯದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವೇನೆಂಬುದನ್ನು ವೈದ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಜನಸಾಗರದ ನಡುವೆ ಉಸಿರಾಡಲು ತೊಂದರೆ ಅನುಭವಿಸುತ್ತಿದ್ದ ಭಕ್ತರ ನೆರವಿಗೆ ತುರ್ತು ರಕ್ಷಣಾ ತಂಡಗಳು ಧಾವಿಸಿದವು. ಈ ಕುರಿತು ಮಾಹಿತಿ ನೀಡಿರುವ ಅಗ್ನಿಶಾಮಕ ಸೇವೆಗಳ ಇನ್ಸ್‌ಪೆಕ್ಟರ್ ಜನರಲ್ ಉಮಾಶಂಕರ್ ದಾಶ್ ಅವರು, “ಜನದಟ್ಟಣೆಯಲ್ಲಿ ಸಿಲುಕಿ ಉಸಿರುಗಟ್ಟುತ್ತಿದ್ದ ಸುಮಾರು 100 ಜನರನ್ನು ನಮ್ಮ ತಂಡಗಳು ಸುರಕ್ಷಿತವಾಗಿ ರಕ್ಷಿಸಿವೆ. ಅವರಿಗೆ ತಕ್ಷಣವೇ ಆಮ್ಲಜನಕ (Oxygen) ಹಾಗೂ ಪ್ರಥಮ ಚಿಕಿತ್ಸೆ ನೀಡಿ, ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್‌ಗಳ ಮೂಲಕ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ,” ಎಂದು ತಿಳಿಸಿದ್ದಾರೆ.

ವರ್ಷಕ್ಕೊಮ್ಮೆ ನಡೆಯುವ ಈ ಸುಪ್ರಸಿದ್ಧ ರಥಯಾತ್ರೆಯು ಅತ್ಯಂತ ಪವಿತ್ರವಾದುದಾಗಿದೆ. 12ನೇ ಶತಮಾನದ ಪುರಿ ಜಗನ್ನಾಥ ದೇಗುಲದಿಂದ ಗರ್ಭಗುಡಿಯ ದೇವತೆಗಳಾದ ಜಗನ್ನಾಥ, ಸುಭದ್ರಾ ಮತ್ತು ಬಲಭದ್ರ ಮೂರ್ತಿಗಳನ್ನು ಹೊರತಂದು, ಭವ್ಯವಾದ ಮರದ ರಥಗಳಲ್ಲಿ ಕೂರಿಸಿ ಗುಂಡಿಚಾ ದೇವಸ್ಥಾನಕ್ಕೆ ಸಾಗಿಸುವ ಏಕೈಕ ಅಪೂರ್ವ ಸಂದರ್ಭ ಇದಾಗಿದೆ. ಹೀಗಾಗಿ ಈ ಪಾವಿತ್ರ್ಯತೆಗೆ ಸಾಕ್ಷಿಯಾಗಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಯ ಗಲ್ಲಿ ಗಲ್ಲಿಗಳಲ್ಲಿ ಜಮಾಯಿಸಿದ್ದರು.

ಇದನ್ನೂ ಓದಿ: ಪುಣ್ಯಕ್ಷೇತ್ರದಲ್ಲೂ ಮುಗಿಯದ ರೀಲ್ಸ್ ಹಾವಳಿ: ದೇವಸ್ಥಾನದೊಳಗೆ ಕುಣಿಯುತ್ತಿದ್ದ ಯುವತಿಯನ್ನು ಓಡಿಸಿದ ಪೊಲೀಸ್; ವಿಡಿಯೋ ವೈರಲ್

ರಥಯಾತ್ರೆಯ ವೇಳೆ ಸಂಭವಿಸಿದ ಈ ದುರಂತಕ್ಕೆ ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜು ಜನತಾದಳ (BJD) ಪಕ್ಷದ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಗೊಂಡ ಭಕ್ತರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *