ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಇಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಅಮೃತ್ ಭಾರತ್ ಸ್ಟೇಷನ್’ (Amrit Bharat Station Scheme) ಅಡಿಯಲ್ಲಿ ಭಾರಿ ವೆಚ್ಚದಲ್ಲಿ ನೂತನವಾಗಿ ಉನ್ನತೀಕರಣಗೊಂಡಿರುವ ಬಂಟ್ವಾಳ ರೈಲ್ವೆ ನಿಲ್ದಾಣವು ಇಂದಿನಿಂದ ಸಾರ್ವಜನಿಕ ಸೇವೆಗೆ ಅಧಿಕೃತವಾಗಿ ಮುಕ್ತವಾಗಿದೆ. ಭಾರತದ ರೈಲ್ವೆ ಮೂಲಸೌಕರ್ಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅತ್ಯಂತ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ದೇಶದ ಒಟ್ಟು 75 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ಮೋದಿ ಅವರು ಇಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಿಂದಲೇ ಆನ್ಲೈನ್ (ವರ್ಚುವಲ್) ಮೂಲಕ ಬಂಟ್ವಾಳದ ಈ ನವೀಕೃತ ರೈಲು ನಿಲ್ದಾಣವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಬಂಟ್ವಾಳ ರೈಲು ನಿಲ್ದಾಣವನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಅತ್ಯಾಧುನಿಕ ಮಾದರಿಯಲ್ಲಿ ಮರುವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಬಿ.ಸಿ. ರೋಡ್ ಯುವತಿ ಕೊಲೆ ಪ್ರಕರಣ: ಒಡಿಶಾದ ಪುರಿಯಿಂದಲೇ ತಕ್ಷಣ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್
ಬರೋಬ್ಬರಿ 26.18 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ಈ ನಿಲ್ದಾಣವನ್ನು ನವೀಕರಿಸಲಾಗಿದ್ದು, ಅತ್ಯಾಧುನಿಕ ಕಾಯುವ ಕೊಠಡಿಗಳು, ಸುಧಾರಿತ ಶೌಚಾಲಯಗಳು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಉಚಿತ ವೈ-ಫೈ ಹಾಗೂ ಸುಸಜ್ಜಿತ ಪ್ಲಾಟ್ಫಾರ್ಮ್ಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸ್ಥಳೀಯ ಜನಪ್ರತಿನಿಧಿಗಳು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಬಂಟ್ವಾಳದ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಹೈಟೆಕ್ ರೈಲ್ವೆ ನಿಲ್ದಾಣವಾಗಿ ಮಾರ್ಪಟ್ಟಿರುವ ಬಂಟ್ವಾಳ ಇನ್ಮುಂದೆ ಕರಾವಳಿಯ ಪ್ರಮುಖ ರೈಲ್ವೆ ಹಬ್ಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

