ವಾಹನ ಸವಾರರಿಗೆ ಹೈಕೋರ್ಟ್ ಬಿಗ್ ರಿಲೀಫ್!: ಫಾಸ್ಟ್‌ಟ್ಯಾಗ್‌ನಲ್ಲಿ ತಪ್ಪಾಗಿ ಹಣ ಕಟ್ ಆದ್ರೆ 100% ರೀಫಂಡ್ ಪಕ್ಕಾ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ದೇಶದ ಕೋಟ್ಯಂತರ ವಾಹನ ಸವಾರರಿಗೆ ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪೊಂದರ ಮೂಲಕ ಬಂಪರ್ ಕೊಡುಗೆ ನೀಡಿದೆ. ಟೋಲ್ ಪ್ಲಾಜಾಗಳಲ್ಲಿ ತಾಂತ್ರಿಕ ದೋಷ ಅಥವಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಫಾಸ್ಟ್‌ಟ್ಯಾಗ್ ಖಾತೆಯಿಂದ ಹೆಚ್ಚುವರಿ ಹಣ ಕಡಿತವಾದರೆ, ವಾಹನ ಮಾಲೀಕರಿಗೆ ಶೇ. 100 ರಷ್ಟು ಹಣವನ್ನು ಕಡ್ಡಾಯವಾಗಿ ಮರುಪಾವತಿ (100% Refund) ಮಾಡಬೇಕು ಎಂದು ಕೋರ್ಟ್ ಆದೇಶಿಸಿದೆ. ಈ ತೀರ್ಪು ಸದ್ಯ ಒಂದು ರಾಜ್ಯಕ್ಕೆ ಸೀಮಿತವಾಗಿದ್ದರೂ, ಇಡೀ ದೇಶದ ಟೋಲ್ ವ್ಯವಸ್ಥೆಗೆ ಮಾದರಿಯಾಗುವ ಮುನ್ಸೂಚನೆ ನೀಡಿದೆ.

ದೇಶದಲ್ಲಿ ಫಾಸ್ಟ್‌ಟ್ಯಾಗ್ ಜಾರಿಗೆ ಬಂದಾಗಿನಿಂದ ತಾಂತ್ರಿಕ ದೋಷಗಳ ಕಿರಿಕಿರಿ ತಪ್ಪಿಲ್ಲ. ವಾಹನಗಳು ಟೋಲ್ ದಾಟದಿದ್ದರೂ ಹಣ ಕಟ್ ಆಗುವುದು, ಒಂದೇ ಟೋಲ್‌ನಲ್ಲಿ ಎರಡು ಬಾರಿ ಚಾರ್ಜ್ ಮಾಡುವುದು ಹಾಗೂ ನಿಗದಿತ ಶುಲ್ಕಕ್ಕಿಂತ ದುಪ್ಪಟ್ಟು ಹಣ ಕಡಿತವಾಗುವ ದೂರುಗಳು ನಿರಂತರವಾಗಿ ಕೇಳಿಬರುತ್ತಿದ್ದವು. ಇಂತಹದೇ ಒಂದು ಗಂಭೀರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು, “ಫಾಸ್ಟ್‌ಟ್ಯಾಗ್ ವ್ಯವಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ ಇರುವುದೇ ಹೊರತು ಅವರನ್ನು ಸುಲಿಗೆ ಮಾಡುವುದಕ್ಕಲ್ಲ. ಟೋಲ್ ಕಂಪನಿಗಳ ತಪ್ಪಿಗೆ ಗ್ರಾಹಕರು ಜವಾಬ್ದಾರರಲ್ಲ. ತನಿಖೆಯ ನಂತರ ತಪ್ಪು ಸಾಬೀತಾದರೆ ತಕ್ಷಣವೇ ಹಣವನ್ನು ರೀಫಂಡ್ ಮಾಡಬೇಕು” ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ಖಡಕ್ ಆದೇಶ ಹೊರಡಿಸಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಶಾಕ್: ‘ಗೆರಿಲ್ಲಾ 450’ ಬೈಕ್ ಬೆಲೆ ದಿಢೀರ್ ಹೆಚ್ಚಳ

ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ – ಹಣ ವಾಪಸ್ ಪಡೆಯುವುದು ಹೇಗೆ?:

ಸಾಮಾನ್ಯವಾಗಿ 50 ಅಥವಾ 100 ರೂ. ಹೆಚ್ಚಿಗೆ ಕಟ್ ಆದಾಗ ಜನರು ಕೋರ್ಟ್-ಕಚೇರಿ ಎಂದು ಅಲೆಯಲು ಇಷ್ಟಪಡುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಟೋಲ್ ಆಪರೇಟರ್‌ಗಳಿಗೆ ಈ ತೀರ್ಪು ಬಿಗ್ ಶಾಕ್ ನೀಡಿದೆ. ಇನ್ನುಮುಂದೆ ಬ್ಯಾಂಕ್‌ಗಳು ಮತ್ತು ಟೋಲ್ ಆಪರೇಟರ್‌ಗಳು ರೀಫಂಡ್ ಪ್ರಕ್ರಿಯೆಯನ್ನು ಸರಳಗೊಳಿಸಬೇಕಿದೆ.

ಒಂದೊಮ್ಮೆ ನಿಮ್ಮ ಫಾಸ್ಟ್‌ಟ್ಯಾಗ್‌ನಿಂದಲೂ ಹೆಚ್ಚಿನ ಹಣ ಕಡಿತವಾದರೆ, ನೀವು ತಕ್ಷಣವೇ NHAI ಸಹಾಯವಾಣಿ ಸಂಖ್ಯೆ 1033 ಗೆ ಕರೆ ಮಾಡಿ ಅಥವಾ ನಿಮ್ಮ ಫಾಸ್ಟ್‌ಟ್ಯಾಗ್ ಬ್ಯಾಂಕ್‌ಗೆ ದೂರು ನೀಡಬಹುದು. ಹಣ ಕಡಿತವಾದ ಮೆಸೇಜ್ ಹಾಗೂ ವಾಹನದ ವಿವರಗಳನ್ನು ಆಧಾರವಾಗಿ ಒದಗಿಸಿದರೆ, ಹೊಸ ನಿಯಮದ ಪ್ರಕಾರ ಕಡಿತಗೊಂಡ ಸಂಪೂರ್ಣ ಮೊತ್ತವು ನಿಮ್ಮ ಫಾಸ್ಟ್‌ಟ್ಯಾಗ್ ವಾಲೆಟ್‌ಗೆ ಮರಳಿ ಜಮೆಯಾಗಲಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಈ ತೀರ್ಪು ಮೈಲಿಗಲ್ಲಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *