ಪುತ್ತೂರು: ಕರಾವಳಿ ಭಾಗದ ಯುವಕರು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವ ಉದ್ದೇಶದಿಂದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಉಚಿತ ಪೊಲೀಸ್ ನೇಮಕಾತಿ ತರಬೇತಿ ಕಾರ್ಯಾಗಾರದಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದರು.
ಕೊಂಬೆಟ್ಟು ಕ್ರೀಡಾಂಗಣದಲ್ಲಿ ಜು.19 ರಂದು ನಡೆದ ದೈಹಿಕ ಸಾಮರ್ಥ್ಯ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಈ ತರಬೇತಿಯಲ್ಲಿ ಭಾಗವಹಿಸಿರುವ 400ಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಕನಿಷ್ಠ 250 ಮಂದಿ ಪೊಲೀಸ್ ನೇಮಕಾತಿಯಲ್ಲಿ ಆಯ್ಕೆಯಾಗಬೇಕು ಎಂಬುದು ನಮ್ಮ ಗುರಿ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಉಚಿತ ತರಬೇತಿ ನೀಡಲಾಗುತ್ತಿದೆ. ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಎರಡಕ್ಕೂ ಸಮಾನ ಪ್ರಾಮುಖ್ಯತೆ ನೀಡಿ ಸಿದ್ಧತೆ ನಡೆಸಬೇಕು. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ನೇಮಕಾತಿಗಳು ನಡೆಯಲಿರುವುದರಿಂದ ಯುವಕರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಮಾರ್ಗದರ್ಶನ ಅಥವಾ ನೆರವು ಬೇಕಿದ್ದರೆ ತಮ್ಮ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಭರವಸೆ ನೀಡಿದರು.
ಜಿಲ್ಲಾ ಮೀಸಲು ಪಡೆಯ ಅಧಿಕಾರಿ ಬಾಗಣ್ಣ ವಾಲಿಕರ್ ಮಾತನಾಡಿ, ಅಭ್ಯರ್ಥಿಗಳು ಉಳಿದಿರುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ ಸಿದ್ಧರಾಗಬೇಕು ಎಂದರು.
ಕರಾವಳಿಯ ಯುವಕರನ್ನು ಪೊಲೀಸ್ ಇಲಾಖೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ತರಬೇತಿ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟ ಅವರು, ಎತ್ತರದ ಮಾನದಂಡ ಪೂರೈಸದ ಅಭ್ಯರ್ಥಿಗಳು ಇತರ ಇಲಾಖೆಗಳ ನೇಮಕಾತಿಯಲ್ಲೂ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜಾ ಮಾತನಾಡಿ, ಒಂದು ಬಾರಿ ವಿಫಲರಾದರೆ ನಿರಾಶರಾಗದೆ ನಿರಂತರ ಅಭ್ಯಾಸದ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು ಎಂದರು.
ಇದನ್ನೂ ಓದಿ: ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ದಿಢೀರ್ ಭೇಟಿ
ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮಾತನಾಡಿ, ಕಳೆದ ವಾರ ಲಿಖಿತ ಪರೀಕ್ಷೆಗೆ ಹಾಗೂ ಇದೀಗ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಉಚಿತ ತರಬೇತಿ ನೀಡುವ ಮೂಲಕ ಜಿಲ್ಲೆಯ ಯುವಕರನ್ನು ಪೊಲೀಸ್ ನೇಮಕಾತಿಗೆ ಸಜ್ಜುಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಕಳೆದ 13 ವರ್ಷಗಳಿಂದ ಟ್ರಸ್ಟ್ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಐಎಎಸ್ ಹಾಗೂ ಐಪಿಎಸ್ ಆಕಾಂಕ್ಷಿಗಳಿಗೆ ಉಚಿತ ತರಬೇತಿಯನ್ನೂ ನೀಡುತ್ತಿದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಶಾಸಕ ಅಶೋಕ್ ರೈ ಅವರ ಸಮಾಜಮುಖಿ ಕಾರ್ಯಕ್ರಮಗಳಿಂದ ಅನೇಕ ಯುವಕರಿಗೆ ಉದ್ಯೋಗಾವಕಾಶ ದೊರೆಯುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೊಂಬೆಟ್ಟು ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ದಯಾನಂದ ರೈ ಕೋರ್‌ಮಂಡ, ಪಂಜಿಗುಡ್ಡೆ ಈಶ್ವರ್ ಭಟ್, ರಾಮಣ್ಣ ಪಿಲಿಂಜ, ಸಬ್ ಇನ್‌ಸ್ಪೆಕ್ಟರ್ ಸುರೇಶ್ ಸಿ.ಟಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಮುಚ್ಚನ್ ಕಾರ್ಯಕ್ರಮ ನಿರೂಪಿಸಿದರು.

