ಮುಂಗಾರು ಅಧಿವೇಶನ: ಜಾಗತಿಕ ಯುದ್ಧದ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠ, ಶೇ. 7.7 ರಷ್ಟು ಪ್ರಗತಿ

ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಅಧಿಕೃತವಾಗಿ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ದೇಶದ ಆರ್ಥಿಕ ಸ್ಥಿರತೆ, ಖಾಸಗಿ ಬಾಹ್ಯಾಕಾಶ ವಲಯದ ಐತಿಹಾಸಿಕ ಸಾಧನೆ ಹಾಗೂ ಯುವ ಸಾಮರ್ಥ್ಯವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು.

ಇಡೀ ಜಗತ್ತು ಹಾಗೂ ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮತ್ತು ಭೀಕರ ಸಂಘರ್ಷದ ಪರಿಸ್ಥಿತಿ ಎದುರಾಗಿದ್ದರೂ ಭಾರತದ ಆರ್ಥಿಕತೆ ಶಕ್ತಿಯುತವಾಗಿ ಬೆಳೆದಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.

ಜಾಗತಿಕ ಮಟ್ಟದಲ್ಲಿ ತೀವ್ರ ಸವಾಲುಗಳು ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ವಿಶ್ವದಾದ್ಯಂತ ದೊಡ್ಡ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತವು ಬರೋಬ್ಬರಿ ಶೇಕಡಾ 7.7 ರಷ್ಟು ಭಾರಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. “ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಷಯ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ‘ಸ್ಕೈರೂಟ್’ ಇತ್ತೀಚೆಗೆ ಸಾಧಿಸಿದ ರಾಕೆಟ್ ಉಡಾವಣೆಯ ಐತಿಹಾಸಿಕ ಯಶಸ್ಸನ್ನು ಪ್ರಧಾನಿ ಮೋದಿ ವಿಶೇಷವಾಗಿ ಸ್ಮರಿಸಿದರು.

“ಕಳೆದ ವರ್ಷ ನಮ್ಮ ಭಾರತೀಯ ನಾಗರಿಕನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಈಗ ನಮ್ಮ ದೇಶದ ಯುವಕರು ಬಾಹ್ಯಾಕಾಶಕ್ಕೆ ಹೊಸ ಖಾಸಗಿ ಪ್ರಯಾಣವನ್ನು ಆರಂಭಿಸಿದ್ದಾರೆ. ಭಾರತದ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ.” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಗಣಿತದಲ್ಲಿ 51 ಅಂಕ ಗಳಿಸಿದ್ದ ಹುಡುಗ ಇಂದು ಬಾಹ್ಯಾಕಾಶದ ಕಿಂಗ್: ‘ವಿಕ್ರಮ್-೧’ ರಾಕೆಟ್ ರೂವಾರಿ ಪವನ್ ಕುಮಾರ್ ಚಂದನಾ

ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಯುವ ನವೋದ್ಯಮಿಗಳ ಇಂತಹ ಪ್ರಗತಿಯು ದೇಶದ ತಂತ್ರಜ್ಞಾನ ವಲಯಕ್ಕೆ ಹೊಸ ದಿಕ್ಸೂಚಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಸಂಸತ್ತಿನ ಕಲಾಪಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿ ಹಾಗೂ ಪ್ರಗತಿಯ ದೃಷ್ಟಿಯಿಂದ ಈ ಬಾರಿಯ ಮುಂಗಾರು ಅಧಿವೇಶನವು ಅತ್ಯಂತ ಫಲಪ್ರದವಾಗಿ, ಪ್ರಗತಿದಾಯಕವಾಗಿ ಮತ್ತು ಸೌಹಾರ್ದಯುತವಾಗಿ ನಡೆಯಲಿ ಎಂದು ಆಶಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *