ದೆಹಲಿಯ ಜಂತರ್ ಮಂತರ್‌ನಲ್ಲಿ ತೀವ್ರ ಉದ್ವಿಗ್ನತೆ: ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್

ದೆಹಲಿ: ರಾಜಧಾನಿ ದೆಹಲಿಯ ಪ್ರಸಿದ್ಧ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಸೋಮವಾರ ಭಾರಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಿಜೆಪಿ (CJP) ಸಂಘಟನೆಯು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಜಮಾಯಿಸಿದ್ದ ಪ್ರತಿಭಟನಾಕಾರರು ಮತ್ತು ರೈಲ್ವೆ ಸುರಕ್ಷತಾ ಪಡೆ (RPF) ಸಿಬ್ಬಂದಿ ನಡುವೆ ಸಂಘರ್ಷ ನಡೆದಿದೆ. ಆಕ್ರೋಶಿತ ಜನಸಮೂಹವನ್ನು ನಿಯಂತ್ರಿಸಲು ಆರ್‌ಪಿಎಫ್ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಲಾಠಿ ಚಾರ್ಜ್ ನಡೆಸಿದ್ದಾರೆ.

ಸಿಜೆಪಿ ಹಮ್ಮಿಕೊಂಡಿದ್ದ ಈ ಬೃಹತ್ ಪ್ರತಿಭಟನಾ ಮೆರವಣಿಗೆಯ ಭದ್ರತೆಗಾಗಿ ಜಂತರ್ ಮಂತರ್ ಆವರಣದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮೀರಿ ಮುನ್ನುಗ್ಗಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು, ನಂತರ ಅದು ಪರಸ್ಪರ ನೂಕಾಟ ಮತ್ತು ಭೀಕರ ಘರ್ಷಣೆಗೆ ತಿರುಗಿತು.

ಇದನ್ನೂ ಓದಿ: ಗಣಿತದಲ್ಲಿ 51 ಅಂಕ ಗಳಿಸಿದ್ದ ಹುಡುಗ ಇಂದು ಬಾಹ್ಯಾಕಾಶದ ಕಿಂಗ್: ‘ವಿಕ್ರಮ್-೧’ ರಾಕೆಟ್ ರೂವಾರಿ ಪವನ್ ಕುಮಾರ್ ಚಂದನಾ

ಎಕ್ಸ್​​ ಪೋಸ್ಟ್​ ಇಲ್ಲಿದೆ ನೋಡಿ:

ಪರಿಸ್ಥಿತಿ ಕೈಮೀರುತ್ತಿದ್ದಂತೆ ಮತ್ತು ಪ್ರತಿಭಟನಾಕಾರರು ಕಾನೂನು ಕೈಗೆತ್ತಿಕೊಳ್ಳಲು ಮುಂದಾದಾಗ, ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದ ಜನಸಮೂಹವನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹಾಗೂ ಆರ್‌ಪಿಎಫ್ ಸಿಬ್ಬಂದಿ ಜಂಟಿಯಾಗಿ ಲಠಿಚಾರ್ಜ್ (Lathi Charge) ನಡೆಸಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದ ದೃಶ್ಯಗಳು ಕಂಡುಬಂದವು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *