ನವದೆಹಲಿ : ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ದಲ್ಲಾಳಿಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಭಾರತೀಯ ರೈಲ್ವೆಯು 300 ಪ್ರಮುಖ ರೈಲುಗಳಲ್ಲಿ OTP (ಒನ್ ಟೈಮ್ ಪಾಸ್‌ವರ್ಡ್) ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಜನವರಿ 12ರಿಂದ ಕಾರ್ಯಾರಂಭಿಸಿರುವ ಈ ಹೊಸ ವ್ಯವಸ್ಥೆಯಡಿ, ಪ್ರಯಾಣಿಕರು ಟಿಕೆಟ್ ಪಡೆಯುವ ಮೊದಲು ತಮ್ಮ ಮೊಬೈಲ್ ಸಂಖ್ಯೆಯನ್ನು OTP ಮೂಲಕ ದೃಢೀಕರಿಸಬೇಕಾಗುತ್ತದೆ. ಇದರಿಂದ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಇನ್ನಷ್ಟು ಸುರಕ್ಷಿತ ಹಾಗೂ ಪ್ರಯಾಣಿಕ ಸ್ನೇಹಿಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ಮತ್ತು ಕೌಂಟರ್ ಬುಕ್ಕಿಂಗ್‌ಗೆ ಅನ್ವಯ ಈ OTP ಪರಿಶೀಲನಾ ವ್ಯವಸ್ಥೆ ಆನ್‌ಲೈನ್ ಬುಕ್ಕಿಂಗ್‌ಗೂ ಮತ್ತು ರೈಲು ನಿಲ್ದಾಣದ ಕೌಂಟರ್ ಟಿಕೆಟ್‌ಗಳಿಗೂ ಅನ್ವಯವಾಗಲಿದೆ. ವಿಶೇಷವಾಗಿ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್ ಮೊದಲಾದ ಪ್ರೀಮಿಯಂ ರೈಲುಗಳಲ್ಲಿ ಇದು ಕಡ್ಡಾಯವಾಗಿದೆ.

ಅನಧಿಕೃತ ಏಜೆಂಟ್‌ಗಳ ಹಸ್ತಕ್ಷೇಪಗಳಿಗೆ ಕಡಿವಾಣ ;
ರೈಲು ಕೌಂಟರ್‌ನಲ್ಲಿ ಟಿಕೆಟ್ ಪಡೆಯುವ ಪ್ರಯಾಣಿಕರು ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಆ ಸಂಖ್ಯೆಗೆ OTP ಬರುತ್ತದೆ. OTP ಅನ್ನು ನಮೂದಿಸಿದ ನಂತರವೇ ಟಿಕೆಟ್ ನೀಡಲಾಗುತ್ತದೆ. ಈ ಕ್ರಮದಿಂದ, ನಕಲಿ ಟಿಕೆಟ್ ಬುಕ್ಕಿಂಗ್, ಒಬ್ಬ ವ್ಯಕ್ತಿಯಿಂದ ಅನೇಕ ಟಿಕೆಟ್ ಖರೀದಿ, ಅನಧಿಕೃತ ಏಜೆಂಟ್‌ಗಳ ಹಸ್ತಕ್ಷೇಪ ಇತ್ಯಾದಿ ಕೆಲಸಗಳಿಗೆ ಕಡಿವಾಣ ಬೀಳಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಹಾಗೂ ಭದ್ರತೆ ಸಿಗಲಿದೆ.
ಉತ್ತರ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಶಿಕಾಂತ್ ತ್ರಿಪಾಠಿ ಮಾತನಾಡಿ, ಮೊದಲ ಹಂತದಲ್ಲಿ ದೇಶಾದ್ಯಂತ 300 ರೈಲುಗಳಲ್ಲಿ OTP ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಉತ್ತಮ ಫಲಿತಾಂಶ ಕಂಡುಬಂದರೆ, ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೂ ವಿಸ್ತರಿಸಲಾಗುತ್ತದೆ, ಎಂದು ತಿಳಿಸಿದ್ದಾರೆ.
ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಈಗಾಗಲೇ ಆಧಾರ್ ದೃಢೀಕರಣ ವ್ಯವಸ್ಥೆ ಜಾರಿಯಲ್ಲಿದ್ದು, ಇದು ವಂಚನೆ ತಡೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : New Movie: ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

