Breaking News

ಮಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ, ಬೈಕ್ ರೈಡರ್ ಅರೆಸ್ಟ್

mangaluru-instagram-rape-case

ಮಂಗಳೂರು: ಮಹಿಳಾ ಪೊಲೀಸ್ ಠಾಣೆಯಲ್ಲಿ ಉಡುಪಿ ಮೂಲದ 27 ವರ್ಷದ ಯುವತಿಯೊಬ್ಬರು ಗಂಭೀರ ದೂರು ದಾಖಲಿಸಿದ್ದು, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ, ಬಳಿಕ ಲಾಡ್ಜ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಬಜ್ಪೆಯ ಮರಕಡ ನಿವಾಸಿ ಕಾರ್ತಿಕ್ ಕರ್ಕೇರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ದೂರಿನ ಪ್ರಕಾರ, ಯುವತಿ 2026ರ ಫೆಬ್ರವರಿಯಲ್ಲಿ ಒಮಾನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇನ್‌ಸ್ಟಾಗ್ರಾಂ ಮೂಲಕ ಕಾರ್ತಿಕ್ ಪರಿಚಯವಾಗಿದ್ದನು. ಕೆಲವೇ ದಿನಗಳಲ್ಲಿ ಪ್ರೀತಿಸುವಂತೆ ಒತ್ತಾಯಿಸಿದ್ದಲ್ಲದೆ, ಅರೆಬೆತ್ತಲೆ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದಾನೆ. ಸಂಪರ್ಕ ಕಡಿತಗೊಳಿಸಿದ ಬಳಿಕ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿರುವಂತೆ ಫೋಟೋ ಕಳುಹಿಸಿ ಹಾಗೂ ಆತ್ಮಹತ್ಯೆ ಬೆದರಿಕೆ ಹಾಕಿ ಸಂಪರ್ಕ ಮುಂದುವರಿಸುವಂತೆ ಒತ್ತಡ ಹೇರಿದ್ದಾನೆ ಎನ್ನಲಾಗಿದೆ.

ಮೇ 10ರಂದು ಮಂಗಳೂರಿನಲ್ಲಿ ಭೇಟಿಯಾದ ಬಳಿಕ, ಆತ್ಮಹತ್ಯೆ ಬೆದರಿಕೆ ಹಾಕಿ ತನ್ನೊಂದಿಗೆ ಲಾಡ್ಜ್‌ನಲ್ಲಿ ಉಳಿಯುವಂತೆ ಬಲವಂತ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅದೇ ರಾತ್ರಿ ಮದ್ಯದ ಅಮಲಿನಲ್ಲಿದ್ದಾಗ ತನ್ನ ಒಪ್ಪಿಗೆಯಿಲ್ಲದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಉಕ್ಕಿ ಹರಿವ ನೇತ್ರಾವತಿ: ಬಂಟ್ವಾಳ ತಾಲೂಕಿನಾದ್ಯಂತ ಜಲಾವೃತ, ನೆರೆ ಭೀತಿ

ಘಟನೆಯ ಬಳಿಕವೂ ಆರೋಪಿಯು ಹಣ ಹಾಗೂ ಐಫೋನ್ ನೀಡುವಂತೆ ಒತ್ತಾಯಿಸಿದ್ದಾನೆ. ಮದುವೆ ನಿಶ್ಚಯವಾದ ವಿಚಾರ ತಿಳಿಸಿದ ನಂತರ ಯುವತಿಯ ನಿಶ್ಚಿತ ವರನಿಗೆ ಅವಾಚ್ಯ ಸಂದೇಶ ಕಳುಹಿಸಿ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸಿ ಮದುವೆ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನ್ನ ಜೀವಕ್ಕೂ ಹಾಗೂ ನಿಶ್ಚಿತ ವರನ ಜೀವಕ್ಕೂ ಅಪಾಯವಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆ ಹೆಚ್ಚಿನ ತನಿಖೆ ನಡೆಸುತ್ತಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *