Breaking News

ಗಜ, ಬಚ್ಚನ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪ್ರದೀಪ್ ರಾವತ್ ನಿಧನ

ಮುಂಬೈ: ಬಹುಭಾಷಾ ಚಿತ್ರರಂಗದಲ್ಲಿ ಖಳನಾಯಕ ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಪ್ರದೀಪ್ ಸಿಂಗ್ ರಾವತ್ (74) ಅವರು ಮಂಗಳವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಚಿತ್ರರಂಗದ ಮೂಲಗಳ ಪ್ರಕಾರ, ಪ್ರದೀಪ್ ರಾವತ್ ಅವರು ಕಳೆದ ಕೆಲವು ಸಮಯದಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅನಾರೋಗ್ಯದ ನಡುವೆಯೂ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

1952ರಲ್ಲಿ ದೆಹಲಿಯಲ್ಲಿ ಜನಿಸಿದ ಪ್ರದೀಪ್ ರಾವತ್ ಅವರು ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ದೂರದರ್ಶನದ ಹಲವು ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು. ಆರಂಭದಲ್ಲಿ ಖಳನಾಯಕನಾಗಿ ಮಿಂಚಿದ ಅವರು ಬಳಿಕ ವಿವಿಧ ರೀತಿಯ ಪಾತ್ರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಇದನ್ನೂ ಓದಿ: ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ರಣಬಾಳಿ ಅಥವಾ ಮೈಸಾ ಶೂಟಿಂಗ್‌ ವಿಳಂಬ

ಕನ್ನಡ ಚಿತ್ರರಂಗದಲ್ಲೂ ಪ್ರದೀಪ್ ರಾವತ್ ಅವರು ತಮ್ಮ ವಿಶಿಷ್ಟ ಖಳನಾಯಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಉಪೇಂದ್ರ ಅಭಿನಯದ ‘ಪರೋಡಿ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಅವರು, ಬಳಿಕ ದರ್ಶನ್ ಅಭಿನಯದ ‘ಗಜ’ ಚಿತ್ರದಲ್ಲಿ ಸೂರಪ್ಪ, ‘ಅಭಯ್’ ಚಿತ್ರದಲ್ಲಿ ಎಂಎಲ್‌ಎ ನರಸಿಂಹಮೂರ್ತಿ, ಸುದೀಪ್ ಅಭಿನಯದ ‘ಬಚ್ಚನ್’ ಚಿತ್ರದಲ್ಲಿ ಮಂತ್ರಿ ಮಧುಸೂಧನ್, ‘ಎಲೆಕ್ಷನ್’ ಚಿತ್ರದಲ್ಲಿ ನರಸಿಂಹ, ಶಿವರಾಜ್‌ಕುಮಾರ್ ಅಭಿನಯದ ‘ಶಿವಲಿಂಗ’, ‘ಲಕ್ಷ್ಮಣ’ ಹಾಗೂ 2022ರಲ್ಲಿ ಬಿಡುಗಡೆಯಾದ ‘ಚಾಂಪಿಯನ್’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

‘ಸೈ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಭರ್ಜರಿ ಪ್ರವೇಶ

2004ರಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದ ಹಾಗೂ ನಿತಿನ್ ಅಭಿನಯದ ‘ಸೈ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಪ್ರದೀಪ್ ರಾವತ್, ‘ಭಿಕ್ಷು ಯಾದವ್’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದರು.

ಅವರ ಅದ್ಭುತ ಅಭಿನಯದಿಂದ ತೆಲುಗು ಚಿತ್ರರಂಗದ ಪ್ರಮುಖ ಖಳನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.

ನಂತರ ಭದ್ರ, ಅಂದರಿವಾಡು, ಛತ್ರಪತಿ, ಲಕ್ಷ್ಮಿ, ಸ್ಟಾಲಿನ್, ದೇಶಮುದುರು, ಯೋಗಿ, ಜಗದಂ, ಗಜಿನಿ, ಮಸ್ಕಾ, ಓಯ್!, ರೆಬೆಲ್, ನಾಯಕ್, ಬಾದ್‌ಶಾ, 1: ನೇನೊಕ್ಕಡಿನೆ, ಅಲ್ಲುಡು ಸೀನು, ನೇನು ಶೈಲಜ, ಸರೈನೋಡು, ನೇನೇ ರಾಜು ನೇನೇ ಮಂತ್ರಿ, ಜೈ ಲವ ಕುಶ, ವಾಲ್ಟೇರ್ ವೀರಯ್ಯ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು.

ಬಾಲಿವುಡ್‌ನಲ್ಲೂ ಗಮನಾರ್ಹ ಸಾಧನೆ

1985ರಲ್ಲಿ ಬಿಡುಗಡೆಯಾದ ರಾಜ್ ಬಬ್ಬರ್ ಅಭಿನಯದ ‘ಐತ್ಬಾರ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ ಅವರು, ಬಳಿಕ ಹಲವು ಬಾಲಿವುಡ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಅವರ ಕೊನೆಯದಾಗಿ ಬಿಡುಗಡೆಯಾದ ಚಿತ್ರ ‘ಗಾಯಪಡ್ಡ ಸಿಂಹಂ’ ಆಗಿದೆ.

ಪ್ರಶಸ್ತಿಗಳ ಗೌರವ

‘ಸೈ’ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಪ್ರದೀಪ್ ರಾವತ್ ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ (ತೆಲುಗು) ಪ್ರಶಸ್ತಿ, ಸಂತೋಷಂ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಹಾಗೂ 2004ರ ಪ್ರತಿಷ್ಠಿತ ನಂದಿ ಪ್ರಶಸ್ತಿ ಲಭಿಸಿತ್ತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *