ಬಂಟ್ವಾಳ : ದುರ್ಗಿ ಸೇವಾ ವೇದಿಕೆ ಮೋಂತಿಮಾರು ಮಂಚಿ, ದುರ್ಗಾಪರಮೇಶ್ವರಿ ದೇವಸ್ಥಾನ ಮೋಂತಿಮಾರು, ಅಂಚೆ ಇಲಾಖೆ ಪುತ್ತೂರು ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ಜುಲೈ 9 ರಂದು ಆಯೋಜಿಸಲಾದ ಉಚಿತ ಆಧಾರ್, ಆರೋಗ್ಯ ಕಾರ್ಡ್ ನೋಂದಣಿ ಶಿಬಿರ ಹಾಗೂ ವನಮಹೋತ್ಸವ ಕಾರ್ಯಕ್ರಮವು ಮೋಂತಿಮಾರುವಿನಲ್ಲಿ ಯಶಸ್ವಿಯಾಗಿ ನೆರವೇರಿತು.
ಸಾರ್ವಜನಿಕರ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಬಹೂಪಯೋಗಿ ಸೇವಾ ಶಿಬಿರಕ್ಕೆ ಸ್ಥಳೀಯ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್ ನೋಂದಣಿ, ಆಧಾರ್ ತಿದ್ದುಪಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ವಿಮೆ ಹಾಗೂ ಈ-ಶ್ರಮ (e-Shram) ಕಾರ್ಡ್ ನೋಂದಣಿ ಸೌಲಭ್ಯಗಳನ್ನು ಒದಗಿಸಲಾಯಿತು.

150ಕ್ಕೂ ಹೆಚ್ಚು ಸಾರ್ವಜನಿಕರು ಈ ವಿವಿಧ ಸರ್ಕಾರಿ ಯೋಜನೆಗಳ ಉಚಿತ ನೋಂದಣಿ ಹಾಗೂ ತಿದ್ದುಪಡಿ ಶಿಬಿರದ ನೇರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ 350ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವನಮಹೋತ್ಸವ ಆಚರಿಸಿ, ಸಾರ್ವಜನಿಕರಿಗೆ 200ಕ್ಕೂ ಹೆಚ್ಚು ಗಿಡ/ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಇದನ್ನೂ ಓದಿ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಲು ಸಹಕರಿಸಿದ ಅಂಚೆ ಇಲಾಖೆ ಸಿಬ್ಬಂದಿ, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ, ಉದ್ಘಾಟಕರು ಹಾಗೂ ಭಾಗವಹಿಸಿದ ಎಲ್ಲಾ ಸಾರ್ವಜನಿಕರಿಗೂ ದುರ್ಗಿ ಸೇವಾ ವೇದಿಕೆಯ ಸಂಚಾಲಕರು ಮತ್ತು ಸದಸ್ಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮುಂಬರುವ ದಿನಗಳಲ್ಲೂ ಸಾರ್ವಜನಿಕ ಸೇವಾ ಕಾರ್ಯಕ್ರಮಗಳಿಗೆ ಇದೇ ರೀತಿಯ ಸಹಕಾರ ನೀಡುವಂತೆ ವಿನಂತಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

