Breaking News

ಅಂಬಿಕಾ ಸಂಸ್ಥೆಗಳಲ್ಲಿ ಮಾಜಿ ಸೈನಿಕರ ಸಮ್ಮಿಲನ-ಭೋಜನಕೂಟ: ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು : ದೇಶದಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ನೆಲೆಸಿದ್ದರೆ, ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಮಾಜಿ ಸೈನಿಕರನ್ನು ಹಾಗೂ ಅವರ ಕುಟುಂಬಸ್ಥರನ್ನು ಗೌರವಿಸುವ ಮೂಲಕ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ.

ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರ ಪರಿಕಲ್ಪನೆಯಂತೆ ಭಾರತೀಯ ಸೇನೆ ಹಾಗೂ ಬಿಎಸ್‌ಎಫ್ (BSF) ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪುತ್ತೂರು ತಾಲೂಕಿನ ನೂರಾರು ಮಾಜಿ ವೀರಯೋಧರ ಸಮ್ಮಿಲನ ಹಾಗೂ ಭೋಜನಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರು, “ನಮ್ಮ ತ್ರಿವರ್ಣ ಧ್ವಜ ಹಾರಾಡುತ್ತಿರುವುದು ಬರೀ ಗಾಳಿಯಿಂದಲ್ಲ, ಬದಲಿಗೆ ನಮ್ಮ ಸೈನಿಕರ ಉಸಿರಿನಿಂದ. ನಮಗಾಗಿ ತಮ್ಮ ತಾರುಣ್ಯವನ್ನೇ ಸಮರ್ಪಿಸಿದ ವೀರಯೋಧರ ಋಣದಲ್ಲಿ ನಾವಿದ್ದೇವೆ. ಆ ಋಣವನ್ನು ತೀರಿಸುವ ಸಣ್ಣ ಪ್ರಯತ್ನವಾಗಿ ಈ ಸಮ್ಮಿಲನ ಹಾಗೂ ಗೌರವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ,” ಎಂದರು.

ದಕ್ಷಿಣ ಭಾರತದ ಮೊದಲ ಖಾಸಗಿ ಅಮರ್ ಜವಾನ್ ಜ್ಯೋತಿ ಸ್ಥಾಪಿಸಿದ ಅಂಬಿಕಾ ಸಂಸ್ಥೆಯು ಸದಾ ದೇಶಭಕ್ತಿಗೆ ಆದ್ಯತೆ ನೀಡುತ್ತಾ ಬಂದಿದೆ ಎಂದು ಅವರು ಸ್ಮರಿಸಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್, ಬಾಲಕೃಷ್ಣ ಬೋರ್ಕರ್ ಹಾಗೂ ನೂರಾರು ಮಾಜಿ ಯೋಧರು ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

 

Leave a Reply

Your email address will not be published. Required fields are marked *