ಪುಣೆ, : ಮಹಾರಾಷ್ಟ್ರದ ಪುಣೆಯಲ್ಲಿರುವ ಐತಿಹಾಸಿಕ ಸಿಂಹಗಢ ಕೋಟೆಗೆ ಭೇಟಿ ನೀಡಿದ್ದ ಪ್ರವಾಸಿಗರ ಮೇಲೆ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ ಆಘಾತಕಾರಿ ಘಟನೆ ಸಂಭವಿಸಿದೆ. ಶಾರ್ಟ್ಸ್ ಹಾಗೂ ಸ್ಲೀವ್ಲೆಸ್ ಧರಿಸಿದ್ದಾರೆ ಎಂಬ ಕಾರಣಕ್ಕೆ ಯುವತಿ ಸೇರಿದಂತೆ ನಾಲ್ವರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಲಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಭಾನುವಾರ ಮಧ್ಯಾಹ್ನ ಸಿಂಹಗಢ ಕೋಟೆಗೆ ಆಗಮಿಸಿದ್ದ ಪ್ರವಾಸಿಗರು ಧರಿಸಿದ್ದ ಉಡುಪನ್ನು ಪ್ರಶ್ನಿಸಿದ ಕಾರ್ಯಕರ್ತರು, ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದು ದೌರ್ಜನ್ಯ ಎಸಗಿದ್ದಾರೆ.ಸಂಘಟನೆಯ ಸದಸ್ಯರು ಪ್ರವಾಸಿಗರನ್ನು ತಡೆದು ಬೆದರಿಕೆ ಹಾಕುವ ಹಾಗೂ ಹಲ್ಲೆ ನಡೆಸುವ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Video:
ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಮೇಲೆ ನಡೆಯುತ್ತಿರುವ ಇಂತಹ ‘ಮೋರಲ್ ಪೋಲಿಸಿಂಗ್’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ವೀಡಿಯೊ ಆಧಾರದ ಮೇಲೆ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

