Breaking News

ಭಾರೀ ಮಳೆ ರಜೆ ಸರಿದೂಗಿಸಲು ಶಿಕ್ಷಣ ಇಲಾಖೆ ಪ್ಲಾನ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಶನಿವಾರ ಪೂರ್ಣ ದಿನದ ತರಗತಿ

ಮಂಗಳೂರು (ಆಗಸ್ಟ್ 21, 2026): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನೀಡಿರುವ ರಜೆಗಳ ಕೊರತೆಯನ್ನು ನೀಗಿಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ನೂತನ ಶೈಕ್ಷಣಿಕ ಆದೇಶ ಹೊರಡಿಸಿದ್ದಾರೆ.

ರಜೆಯಿಂದಾಗಿ ಕೊರತೆಯಾಗಿರುವ ಬೋಧನಾ ಅವಧಿಯನ್ನು ಸರಿದೂಗಿಸಲು ಸೆಪ್ಟಂಬರ್ ತಿಂಗಳ ಎರಡನೇ ಶನಿವಾರದಿಂದ ಪೂರ್ಣ ದಿನದ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.

ಎಷ್ಟು ದಿನಗಳ ರಜೆ ಕೊರತೆ?

ಮಳೆ ಆರ್ಭಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ವಿವಿಧ ತಾಲೂಕುಗಳಲ್ಲಿ ರಜೆ ಘೋಷಿಸಿದ್ದರು:

ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ, ಮೂಡುಬಿದಿರೆ ವಲಯ: ಒಟ್ಟು 8 ಪೂರ್ಣ ದಿನ ಮತ್ತು 1 ಅರ್ಧ ದಿನದ ರಜೆ.

ಬೆಳ್ತಂಗಡಿ, ಪುತ್ತೂರು, ಸುಳ್ಯ ವಲಯ: ಒಟ್ಟು 9 ಪೂರ್ಣ ದಿನಗಳ ರಜೆ ನೀಡಲಾಗಿತ್ತು.

ಬೋಧನಾ ಅವಧಿ ಸರಿದೂಗಿಸಲು ನೂತನ ಮಾರ್ಗಸೂಚಿ:

ಸೆಪ್ಟಂಬರ್ 2ನೇ ಶನಿವಾರ ಪೂರ್ಣ ತರಗತಿ: ಕೊರತೆಯಾಗಿರುವ ಪಾಠದ ಅವಧಿಯನ್ನು ಪೂರ್ಣಗೊಳಿಸಲು ಸೆಪ್ಟಂಬರ್ ತಿಂಗಳ 2ನೇ ಶನಿವಾರದಂದು ಮಧ್ಯಾಹ್ನದ ನಂತರವೂ ಪೂರ್ಣ ದಿನದ ಶಾಲೆಯನ್ನು ನಡೆಸಬೇಕು.

ಸಂಜೆ ಹೆಚ್ಚುವರಿ ತರಗತಿ: ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಸಾಮಾನ್ಯ ಶಾಲಾ ದಿನಗಳಲ್ಲಿ ಸಂಜೆ ವೇಳೆ ಹೆಚ್ಚುವರಿಯಾಗಿ ಒಂದು ಬೋಧನಾ ಅವಧಿಯನ್ನು (Extra Class) ತೆಗೆದುಕೊಳ್ಳಲು ಸೂಚಿಸಲಾಗಿದೆ.

ಮುಖ್ಯಶಿಕ್ಷಕರ ಜವಾಬ್ದಾರಿ: ಪ್ರತಿಯೊಂದು ಶಾಲೆಯಲ್ಲಿ ದೊರೆತ ಮಳೆಯ ರಜೆಗಳ ಲೆಕ್ಕಾಚಾರ ಮಾಡಿ, ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ (SDMC) ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಬೋಧನಾ ದಿನಗಳನ್ನು ಸರಿದೂಗಿಸಲು ಇಲಾಖೆ ನಿರ್ದೇಶಿಸಿದೆ.

Leave a Reply

Your email address will not be published. Required fields are marked *