ಪುತ್ತೂರು: ದರ್ಬೆ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ಆ.21ರಂದು ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಹಕಿಯ ನಡುವೆ ಮಾತಿನ ಚಕಮಕಿ ನಡೆದು, ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿ ಹೋಯ್ ಹೋಯ್ ನಡೆದಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆ.21ರಂದು ಮಧ್ಯಾಹ್ನ ವೇಳೆ ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬವರು ಪುತ್ತೂರು ದರ್ಬೆ ಎಂಬಲ್ಲಿರುವ ಅಂಜನಾ ಪೈ ಎಂಬವರ ಡ್ರೀಮ್ ಡೆಸ್ಟಿನೇಷನ್ ಡಿಜಿಟಲ್ ಸೇವಾ ಕೇಂದ್ರ ಎಂಬ ಆಂಗಡಿಗೆ ತೆರಳಿ ಕೆಲವು ದಾಖಲಾತಿಗಳನ್ನು ಜೆರಾಕ್ಸ್ ಮತ್ತು ಲ್ಯಾಮಿನೇಷನ್ ಮಾಡಲು ನೀಡಿದ್ದಾರೆ. ಈ ಪೈಕಿ ಒಂದು ದಾಖಲೆಪತ್ರ ತಾಂತ್ರಿಕ ದೋಷದಿಂದ ಸುಟ್ಟುಹೋಗಿದ್ದು, ಈ ವಿಚಾರವಾಗಿ ಮುಬಾಶಿರ, ಫಾತೀಮಾ, ಮುಬಾಶಿರ್ ಹಾಗೂ ಅಂಗಡಿಯ ಅಂಜನಾ ಪೈ ಮತ್ತು ಅವರ ಮಗ ಸುದರ್ಶನ್ ಪೈ ಎಂಬವರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಭಾರೀ ಮಳೆ ರಜೆ ಸರಿದೂಗಿಸಲು ಶಿಕ್ಷಣ ಇಲಾಖೆ ಪ್ಲಾನ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಶನಿವಾರ ಪೂರ್ಣ ದಿನದ ತರಗತಿ
ಈ ವೇಳೆ ಜನರು ಗುಂಪು ಸೇರಿದ್ದು, ಸ್ಥಳಕ್ಕೆ ಧಾವಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದು ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದಾರೆ.
ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆದೊಯ್ಯುವ ವೇಳೆ ಅಲ್ಲಿ ಸೇರಿದ್ದ ಕೆಲವು ಜನರು ತಡೆಯೊಡ್ಡಿದ್ದಾರೆ. ಸದ್ಯ, ಘಟನೆಗೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮತ್ತೊಂದು ದೂರು ದಾಖಲಿಸಿಕೊಳ್ಳಲಾಗುತ್ತಿದೆ.
ಸಾರ್ವಜನಿಕರಿಗೆ ಪೊಲೀಸ್ ವಾರ್ನ್
ಕೃತ್ಯ ನಡೆದ ಅಂಗಡಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಸಿಸಿಟಿವಿ ಪರಿಶೀಲಿಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

