ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಬೆಳಗಿನ ಜಾವ ಟ್ರಾನ್ಸ್‌ಜೆಂಡರ್ (ಲಿಂಗತ್ವ ಅಲ್ಪಸಂಖ್ಯಾತೆ) ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದ 29 ವರ್ಷದ ಆರೋಪಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಮಮೂರ್ತಿ ನಗರದ ನಿವಾಸಿ ಗೌತಮ್ (29) ಎಂದು ಗುರುತಿಸಲಾಗಿದ್ದು, ಕೊಲೆಯಾದ ಲಿಂಗತ್ವ ಅಲ್ಪಸಂಖ್ಯಾತೆಯನ್ನು ದೇವಿ ಎಂದು ಗುರುತಿಸಲಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಬೆಳಗಿನ ಜಾವ ಸುಮಾರು 2:30 ರಿಂದ 3:00 ಗಂಟೆಯ ಅವಧಿಯಲ್ಲಿ ಈ ದಾರುಣ ಕೃತ್ಯ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆರೋಪಿ ಗೌತಮ್ ದರೋಡೆ ಮಾಡುವ ಉದ್ದೇಶದಿಂದ ಹೊಂಡಾ ಡಿಯೋ (Honda Dio) ಸ್ಕೂಟರ್‌ನಲ್ಲಿ ಮೆಜೆಸ್ಟಿಕ್ ತಲುಪಿದ್ದ. ಅಲ್ಲಿ ದೇವಿ ಎಂಬುವವರನ್ನು ತಡೆದು ₹200 ನೀಡುವಂತೆ ಬೆದರಿಸಿದ್ದಾನೆ.
ಇದನ್ನೂ ಓದಿ: ಪುತ್ತೂರು ಹಲ್ಲೆ ಪ್ರಕರಣ: ತಾವು ಏನೂ ಮಾಡಿದರೂ ನಮ್ಮ ಬೆಂಬಲಕ್ಕೆ ಸರ್ಕಾರ ಇದೆ ಎಂಬ ಧೈರ್ಯ ಅವರಿಗೆ: ಕಟೀಲ್ ಆಕ್ರೋಶ
ದೇವಿ ಹಣ ನೀಡಲು ನಿರಾಕರಿಸಿ ಪ್ರತಿರೋಧ ಒಡ್ಡಿದಾಗ, ಆಕ್ರೋಶಗೊಂಡ ಆರೋಪಿ ಗೌತಮ್ ಚಾಕುವಿನಿಂದ ದೇವಿಯವರ ತಲೆಗೆ ಬಲವಾಗಿ ಹೊಡೆದು, ಹಲ್ಲೆ ನಡೆಸಿದ್ದಾನೆ. ಬಳಿಕ ಅವರ ಬಳಿಯಿದ್ದ ಪರ್ಸ್ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು, ಚಾಕುವಿನಿಂದ ಹಲವು ಬಾರಿ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದುಬಿದ್ದ ದೇವಿ, ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯವಾಗಿ ಇದ್ದ ದೇವಿಯವರ ಸಹಚರರು ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ವಿಶೇಷ ಪೊಲೀಸ್ ತಂಡವು, ತನಿಖೆ ನಡೆಸಿ ಆರೋಪಿ ಗೌತಮ್‌ನನ್ನು ರಾಮಮೂರ್ತಿ ನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ವೇಳೆ ಆರೋಪಿ ತಾನು ಮದ್ಯದ ಅಮಲಿನಲ್ಲಿ ಹಣ ಹಾಗೂ ಮೊಬೈಲ್ ಕಸಿಯಲು ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

