ಮಂಗಳೂರು: ದೌರ್ಜನ್ಯ ಪ್ರಶ್ನಿಸಿ ಪೊಲೀಸ್ ದೂರು ನೀಡಿದ ಯುವತಿಯೊಬ್ಬಳಿಗೆ “ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತಿನಿ, ಕೊಲ್ಲದೇ ಬಿಡುವುದಿಲ್ಲ” ಎಂದು ವಾಟ್ಸಾಪ್ ವಾಯ್ಸ್ ಮೆಸೇಜ್ ಮೂಲಕ ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿ ನೌಶಾದ್, ಕೊನೆಗೂ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾನೆ.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂತ್ರಸ್ತೆ ವಿಶ್ವ ಹಿಂದೂ ಪರಿಷತ್ (VHP) ಮೊರೆ ಹೋದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪುತ್ತೂರು ಮೂಲದ, ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಸ್ಟಾಫ್ ನರ್ಸ್ ನಂದಿನಿ ಎಂಬುವವರು ಆಗಸ್ಟ್ 16ರಂದು ಮೈಸೂರಿಗೆ ತೆರಳಿದ್ದರು. ಈ ವೇಳೆ ತಮ್ಮ ಮನೆಯಲ್ಲಿದ್ದ ನಾಯಿಗೆ ಊಟ ಹಾಕಲು ತಮ್ಮ ಸ್ನೇಹಿತೆ ಚಂದನಾಗೆ ಮನೆಯ ಕೀ ನೀಡಿ ಹೋಗಿದ್ದರು.
ಆಗಸ್ಟ್ 17ರಂದು ಚಂದನಾ ತನ್ನ ಮತ್ತೊಬ್ಬ ಸ್ನೇಹಿತೆ ಆದಿತ್ಯಾ ಎನ್ನುವ ನರ್ಸ್ ಜೊತೆ ನಂದಿನಿ ರೂಮ್‌ಗೆ ತೆರಳಿದ್ದರು. ಈ ವೇಳೆ ಆದಿತ್ಯಾ ನೀಡಿದ ಮಾಹಿತಿ ಆಧರಿಸಿ ಅಲ್ಲಿಗೆ ಬಂದಿದ್ದ ನೌಶಾದ್ ಎಂಬಾತ, ನಂದಿನಿ ಮನೆಯಲ್ಲಿ ಇಲ್ಲದಿದ್ದಾಗ ಅಕ್ರಮವಾಗಿ ಪ್ರವೇಶಿಸಿ ಚಂದನಾ ಹಾಗೂ ಆದಿತ್ಯಾಗೆ ಅಶ್ಲೀಲವಾಗಿ ನಿಂದಿಸಿ ಗಲಾಟೆ ಮಾಡಿದ್ದಾನೆ.
ವಿಷಯ ತಿಳಿದು ನಂದಿನಿ ಅವರು ಆದಿತ್ಯಾಗೆ ಕರೆ ಮಾಡಿದಾಗ, ಫೋನ್ ಸ್ವೀಕರಿಸಿದ ನೌಶಾದ್ ನಂದಿನಿಗೂ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದ. ಘಟನೆಯಿಂದ ಆತಂಕಗೊಂಡ ನಂದಿನಿ ತಕ್ಷಣವೇ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ವಿಚಾರ ತಿಳಿಯುತ್ತಿದ್ದಂತೆ ವಿಚಲಿತನಾದ ನೌಶಾದ್, ನಂದಿನಿಗೆ ವಾಟ್ಸಾಪ್ ವಾಯ್ಸ್ ಮೆಸೇಜ್ ಕಳುಹಿಸಿ, “ನನಗೆ ಹೆದರಿಕೆ ಇಲ್ಲ, ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತಿನಿ, ಕೊಲ್ಲದೇ ಬಿಡುವುದಿಲ್ಲ” ಎಂದು ಭೀಕರವಾಗಿ ಬೆದರಿಕೆ ಹಾಕಿದ್ದ. ಬೆದರಿಕೆಗೆ ಹೆದರಿದ ನಂದಿನಿ ಆಗಸ್ಟ್ 20 ರಂದು ಮಂಗಳೂರು ಗ್ರಾಮಾಂತರ ಠಾಣೆಗೆ ಮತ್ತೊಮ್ಮೆ ದೂರು ನೀಡಿದ್ದರು. ಆದರೆ ದೂರು ನೀಡಿ ದಿನಗಳು ಕಳೆದರೂ ಪೊಲೀಸರು ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಸೈಬರ್ ಖದೀಮರ ಪತ್ತೆಗೆ ತೆರಳಿದ್ದ ಬೆಂಗಳೂರಿನ ಇನ್ಸ್‌ಪೆಕ್ಟರ್ ಕೆ.ಬಿ. ರವಿ ದುರ್ಮರಣ
ಪೊಲೀಸರಿಂದ ಸೂಕ್ತ ಸ್ಪಂದನೆ ಸಿಗದಿದ್ದಾಗ ರಕ್ಷಣೆ ಕೋರಿ ನರ್ಸ್ ನಂದಿನಿ ವಿಶ್ವ ಹಿಂದೂ ಪರಿಷತ್ ಮುಖಂಡರ ಮೊರೆ ಹೋಗಿದ್ದರು. ವಿಎಚ್‌ಪಿ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಧ್ವನಿ ಎತ್ತುತ್ತಿದ್ದಂತೆ, ಕಂಗಾಲಾದ ಆರೋಪಿ ನೌಶಾದ್ ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾನೆ.

