Breaking News

ಬಪ್ಪಳಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಭ್ರಮದ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಆಚರಣೆ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಗಳಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ನಟ್ಟೋಜ ಶಿವಾನಂದ ರಾವ್–ಸುಶೀಲಾ ರಾವ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಧರ್ಮಾಭ್ಯುದಯ – ಧರ್ಮಶಿಕ್ಷಣ ತಾಲೂಕು ಸಮಿತಿಯ ಕಾರ್ಯದರ್ಶಿ ಆರ್. ಸಿ. ನಾರಾಯಣ್ ಅವರು, “ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಆಚರಣೆಯಲ್ಲ. ಅದು ಪ್ರೀತಿ, ಬಾಂಧವ್ಯ, ಪರಸ್ಪರ ನಂಬಿಕೆ ಹಾಗೂ ರಕ್ಷಣೆ ಮತ್ತು ಭರವಸೆಯ ಮಹತ್ವದ ಸಂಕೇತವಾಗಿದೆ. ಕಷ್ಟದ ಸಮಯದಲ್ಲಿ ಧೈರ್ಯ ತುಂಬುವುದು ಮತ್ತು ಸರಿಯಾದ ದಾರಿ ತೋರಿಸುವುದು ಕೂಡ ರಕ್ಷಣೆಯ ಭಾಗವೇ ಆಗಿದೆ” ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ಮೊದಲ ರಕ್ಷಕರಾದ ತಂದೆ-ತಾಯಂದಿರೊಂದಿಗೆ ಗಟ್ಟಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು ಹಾಗೂ ಸಮಾಜದ ನೋವಿಗೆ ಸ್ಪಂದಿಸುವ ಮಾನವೀಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರು, “ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವ ಶೈಕ್ಷಣಿಕ ಜ್ಞಾನ ನೀಡಿದರೆ ಸಾಲದು. ಭಾರತೀಯ ಸಂಸ್ಕೃತಿ, ಪರಂಪರೆ, ಧಾರ್ಮಿಕ ಮೌಲ್ಯಗಳು ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವ ಸಚ್ಚರಿತ್ರೆಯ ಶಿಕ್ಷಣವೂ ಅತ್ಯಗತ್ಯ” ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರಸ್ಪರ ರಾಖಿ ಕಟ್ಟುವ ಮೂಲಕ ಸಹೋದರತ್ವ ಹಾಗೂ ಪ್ರೀತಿಯ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್. ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಕ್ಷಾಬಂಧನದೊಂದಿಗೆ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.

ಇದನ್ನೂ ಓದಿ: ರಾಜ್ಯಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಪುತ್ತೂರಿನ ಅಂಬಿಕಾ ಕಾಲೇಜಿಗೆ ಪ್ರಥಮ ಸ್ಥಾನ: ರಾಷ್ಟ್ರಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿನಿಯರು ಆಯ್ಕೆ

10ನೇ ತರಗತಿ ವಿದ್ಯಾರ್ಥಿಗಳು ‘ಸೌಹಾರ್ದಂ ಪ್ರಕೃತೇಃ ಶೋಭಾ’ ಎಂಬ ಸಂಸ್ಕೃತ ಲಘು ನಾಟಕ ಪ್ರದರ್ಶಿಸಿದರು. 9 ನೇ ತರಗತಿ ವಿದ್ಯಾರ್ಥಿಗಳು ಸಂಸ್ಕೃತ ಗೀತೆಗಳನ್ನು ಹಾಡಿ ರಂಜಿಸಿದರು. ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *