ದೆಹಲಿ: ದೆಹಲಿಯ ಬವಾನಾ (Bawana) ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಮೂರು ವರ್ಷದ ನರ್ಸರಿ ಮಗುವಿನ ಮೇಲೆ ಶಾಲಾ ಬಸ್ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಹೀನ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 19 ರಂದು ಮಗುವಿನ ಖಾಸಗಿ ಅಂಗಗಳಲ್ಲಿ ಗಾಯಗಳಾಗಿರುವುದನ್ನು ಕಂಡ ಪೋಷಕರು ವಿಚಾರಿಸಿದಾಗ, ಶಾಲೆಯಲ್ಲಿ ಚಾಕೊಲೇಟ್ ನೀಡುತ್ತಿದ್ದ “ಬ್ಯಾಡ್ ಅಂಕಲ್” ಕುರಿತು ಮಗು ತಿಳಿಸಿದೆ.
ಆಗಸ್ಟ್ 24 ರಂದು ಪೊಲೀಸರು ಮಗುವಿಗೆ ಶಾಲೆಯ ಫೋಟೋಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದಾಗ, ಮಗು ಆರೋಪಿಯನ್ನು ಗುರುತಿಸಿದೆ. ತಕ್ಷಣವೇ ಪೊಲೀಸರು ಶಾಲಾ ಆವರಣದಲ್ಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಗುವನ್ನು ಶೌಚಾಲಯದವರೆಗೆ ಹಿಂಬಾಲಿಸಿ ಈ ಕೃತ್ಯ ಎಸಗಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಗುವಿನ ಮೇಲೆ ಕನಿಷ್ಠ ನಾಲ್ಕು ಬಾರಿ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.
ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 8, 10, 21 ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 ರ ಅಡಿಯಲ್ಲಿ ಬವಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯ ಮೊಬೈಲ್ನಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡುತ್ತಿರುವ ವೀಡಿಯೋಗಳು ಪತ್ತೆಯಾಗಿವೆ. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಘಟನೆಯ ಬೆನ್ನಲ್ಲೇ ದೆಹಲಿ ಪೊಲೀಸರು ಎಲ್ಲಾ ಶಾಲೆಗಳಿಗೆ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ನೀಡಲಾಗುವ ಸಂಸ್ಕಾರವೇ ಸಂಸ್ಕೃತಿಯಾಗಿ ಸಮಾಜಕ್ಕೆ ಕೊಡುಗೆಯಾಗುತ್ತದೆ: ಡಾ. ಗೀತಾ ಕುಮಾರಿ ಟಿ.
ಪೊಲೀಸ್ ಪರಿಶೀಲನೆ (Police Verification) ಆಗದ ಸಿಬ್ಬಂದಿ ಹಾಗೂ ಚಾಲಕರನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ವಿದ್ಯಾರ್ಥಿಗಳ ರವಾನೆಗೆ ಅಧಿಕೃತ ಕಮರ್ಷಿಯಲ್ ವಾಹನಗಳನ್ನು ಮಾತ್ರ ಬಳಸಬೇಕು. ಶಾಲೆಯಲ್ಲಿ ಸಿಸಿಟಿವಿ ವ್ಯವಸ್ಥೆ ಸರಿಯಾಗಿ ಕಾರ್ಯಾಚರಿಸುತ್ತಿರಬೇಕು ಹಾಗೂ ಮಕ್ಕಳ ಮೇಲ್ವಿಚಾರಣೆಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಇದೇ ವೇಳೆ, ರಾಜಧಾನಿಯಲ್ಲಿ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ಅವರು ಸರ್ಕಾರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

