Breaking News

ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ ಕಾರ್ಯಕ್ರಮ

ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆ.29ರಂದು ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ’ ಎಂಬ ವಿಶೇಷ ಕಾರ್ಯಕ್ರಮ ಜರುಗಿತು.

ಸುವರ್ಣ ಸಂಭ್ರಮದ ಪೂರ್ವಭಾವಿಯಾಗಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಲಯನ್ ಸತೀಶ್ ಆಳ್ವ ಇರಾ ಬಾಳಿಕೆ ಇವರು ಹೊಸ ಕಾಮಗಾರಿಗೆ ಶಿಲಾನ್ಯಾಸವನ್ನು ನೆರವೇರಿಸಿ, “ನಾಲ್ಕು ದಶಕಗಳ ಹಿಂದೆ ಕೊಳ್ನಾಡು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯೊಂದು ಸ್ಥಾಪನೆಯಾಗಲು ಶಾಲಾ ಪರಿಸರದ ಅನೇಕ ಹಿರಿಯರು ಕಾರಣಕರ್ತರಾಗಿದ್ದಾರೆ. ವಿದ್ಯಾಭಿಮಾನಿಗಳ ಆಶಯದಂತೆ ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದು ಶಾಲೆಯ ಸುವರ್ಣ ಮಹೋತ್ಸವದ ಈ ಸಂಭ್ರಮದಲ್ಲಿ ಸಹಭಾಗಿಗಳಾಗಬೇಕು” ಎಂದರು.

ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿದ್ಯಾರ್ಥಿ, ಉದ್ಯಮಿ, ಸಾಮಾಜಿಕ ಮುಂದಾಳು ಮಾಧವ ಮಾವೆ ಮಾತನಾಡಿ, “ಸುವರ್ಣ ಸಂಭ್ರಮಕ್ಕೆ ಮುನ್ನುಡಿ ಬರೆದ ಈ ಸಂದರ್ಭ ಕೇವಲ ಕಾರ್ಯಕ್ರಮವಾಗದೆ ತಾನು ಕಲಿತ ಶಾಲೆಯ ಋಣವನ್ನು ತೀರಿಸುವ ಅವಕಾಶವಾಗಿ ಮೂಡಿಬಂದಿದೆ. ಕಲಿತ ಶಾಲೆ, ಹೆತ್ತ ತಂದೆ ತಾಯಿ, ಕಲಿಸಿದ ಗುರುಗಳನ್ನು ಮರೆಯದೆ ನಮ್ಮ ಜೀವನದ ಪ್ರಬುದ್ಧತೆಯನ್ನು ಮೆರೆಯಬೇಕು. ಈ ಶಾಲೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ನಾವೆಲ್ಲ ಕಟಿ ಬದ್ಧರಾಗಬೇಕು.” ಎಂದರು.

ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಮಮತಾ ಪಿ ಶೆಟ್ಟಿ ಮಾತನಾಡಿ, “ಈ ಶಾಲೆಯಲ್ಲಿ ಕಂಡ ಬಾಲ್ಯದ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಈ ಶಾಲೆಯ ಸುವರ್ಣ ಮಹೋತ್ಸವದ ಚುಕ್ಕಾಣಿಯನ್ನು ಹಿಡಿದಿರುವ ಹೊತ್ತಲ್ಲಿ ಈ ಶಾಲೆಗೆ ಶ್ರಮಿಸಿರುವ ಎಲ್ಲರೂ ನಮಗೆ ಆದರ್ಶಪ್ರಾಯರಾಗಿದ್ದಾರೆ. ಈ ಶಾಲೆಯ ಸುವರ್ಣ ಮಹೋತ್ಸವ ಕೇವಲ ಒಂದು ಸಂಭ್ರಮವಾಗದೆ ಮುಂದಿನ ನೂರು ವರ್ಷಗಳ ಯೋಜನೆಯಂತೆ ಅರ್ಥಪೂರ್ಣವಾಗಿ ಮೂಡಿ ಬರಬೇಕು.” ಎಂದರು. ಈ ಸಂದರ್ಭದಲ್ಲಿ ಇವರು ಸವಿನೆನಪಿಗೆ ಹಣ್ಣಿನ ಗಿಡವನ್ನು ನೆಟ್ಟು ಪರಿಸರ ಕಾಳಜಿಯ ಜಾಗೃತಿಗೆ ನೆರವಾದರು.

ಹಿರಿಯ ವಿದ್ಯಾರ್ಥಿ ಹಾಗೂ ಅಮೆರಿಕ ಉದ್ಯಮಿ ವೆಂಕಟೇಶ್ ನಾಯ್ಕ್ ನಿರ್ಬೈಲು ಕೊಡುಗೆಯಾಗಿ ನಿರ್ಮಿಸಿದ ತರಗತಿ ಕೊಠಡಿಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ದಾನಿಗಳ ಸಹೋದರ ವಿಶ್ವನಾಥ ನಾಯ್ಕ ನಿರ್ಬೈಲು ಇವರು ದೀಪ ಬೆಳಗಿ ಶಾಲೆಗೆ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮದಲ್ಲಿ ಶಾಲಾ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.

ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದಿಂದ ಕೊಡಮಾಡಿದ ಸೋಲಾರ್ ವಿದ್ಯುತ್ ಘಟಕವನ್ನು ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಚಂದ್ರಹಾಸ ರೈ ಬಾಲಾಜಿಬೈಲು ಉದ್ಘಾಟಿಸಿ, “ಸಂಸ್ಕಾರಯುತವಾದ ಶಿಕ್ಷಣ ಭವಿಷ್ಯದ ಸತ್ಪ್ರಜೆಗಳನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ಈ ಶಾಲೆಯ ಭೌತಿಕ ಅಭಿವೃದ್ಧಿಯಲ್ಲಿ ಪಾಲುದಾರರಾದಾಗ ವಿಕಸಿತ ಭಾರತ ನಿರ್ಮಾಣದಲ್ಲಿ ನಾವೆಲ್ಲರೂ ಕೈಜೋಡಿಸಿದಂತೆ.” ಎಂದರು.

ಇದೇ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರತಿನಿಧಿ ರವೀನ್ ಇವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ; ಬಪ್ಪಳಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಭ್ರಮದ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಆಚರಣೆ

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ ಎಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿ ಪ್ರಧಾನ ಗೌರವಾಧ್ಯಕ್ಷರಾದ ಸತೀಶ್ ಕುಮಾರ್ ಆಳ್ವ, ಅಧ್ಯಕ್ಷರಾದ ಡಾ. ಮಮತಾ ಪಿ ಶೆಟ್ಟಿ ಹಾಗೂ ಸಮಿತಿಯ ಕಾರ್ಯನಿರ್ವಹಣಾ ಕಾರ್ಯದರ್ಶಿ ಹಾಜಿ ಸುಲೈಮಾನ್ ಜಿ ಸುರಿಬೈಲು, ಕಾರ್ಯದರ್ಶಿ ಮ್ಯಾಕ್ಸಿಮ್ ಫರ್ನಾಂಡಿಸ್, ಕೋಶಾಧಿಕಾರಿಯವರಾದ ಲಯನ್ ಉಮಾನಾಥ ರೈ ಮೇರಾವು, ಜೊತೆ ಕಾರ್ಯದರ್ಶಿ ಸುರೇಖಾ ಡಿ ಶೆಟ್ಟಿ, ಜೊತೆಕೋಶಾಧಿಕಾರಿ ಹರಿಪ್ರಸಾದ್ ಕುಲಾಲ್ ನಾರ್ಶ, ಸಂಚಾಲಕರಾದ ರಮಾನಂದ ನೂಜಿಪ್ಪಾಡಿ ಇವರಿಗೆ ಸಾಕ್ಷಿ ಪತ್ರ ಹಸ್ತಾಂತರಿಸುವ ಮೂಲಕ ಸಮಿತಿಯನ್ನು ಅಧಿಕೃತಗೊಳಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಶಂಕರ್ ರಾವ್ ಮಂಚಿ ಮಾತನಾಡಿ, ಸುವರ್ಣ ಸಂಭ್ರಮದ ತಯಾರಿಗೆ ಪ್ರತಿಯೊಬ್ಬರು ತನ್ನ ಕೈಲಾದ ಸೇವೆ ಸಲ್ಲಿಸಬೇಕು. ಆ ಮೂಲಕ ಮಂಚಿ – ಕೊಳ್ನಾಡು ಪ್ರೌಢಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಬೇಕು. ಎಂದರು.

ಈ ಕಾರ್ಯಕ್ರಮದಲ್ಲಿ ಡಾ. ಗೋಪಾಲಾಚಾರ್ ಮಂಚಿ, ರಮೇಶ್ ರಾವ್ ಪತ್ತುಮುಡಿ, ದಿವಾಕರ ಕುಂಟೂರು, ಡಾ. ನಾಗವೇಣಿ ಮಂಚಿ, ಹಿರಿಯ ವಿದ್ಯಾರ್ಥಿ ದೇವಕಿ ಎಚ್, ಗಣೇಶ್ ಪ್ರಭು, ಎಂ. ಡಿ. ಮಂಚಿ, ಯಶೋಧ ಬಿ ಶೆಟ್ಟಿ, ಉಮ್ಮರ್ ಕುಂಞ ಸಾಲೆತ್ತೂರು, ರಮೇಶ ಟೈಲರ್ ಕೋಕಳ, ಹನೀಫ್ ಮಂಚಿ , ಜಯಂತ ಕುಕ್ಕಾಜೆ, ಇಬ್ರಾಹಿಂ ಮಂಚಿ, ಹಾಗೂ ಇನ್ನೂ ಅನೇಕ ಮಹನೀಯರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ಪ್ರಸ್ತಾವಿಕವಾಗಿ ಮಾತನಾಡಿದರು. ಹಿಂದಿ ಭಾಷಾ ಶಿಕ್ಷಕಿಶಾಂತ ಎಸ್ ವಂದಿಸಿದರು. ಚಿತ್ರಕಲಾ ಶಿಕ್ಷಕ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *