Breaking News

ಜೋಹರ್ ಕೃತ್ಯವನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಸಿದ ಸ್ವರಾ ಭಾಸ್ಕರ್: ‘ನಿರ್ಲಜ್ಜತನ’ ಎಂದ ರಣವೀರ್ ಶೋರೆ

ನವದೆಹಲಿ : ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಸೂಪರ್‌ಹಿಟ್ ಸಿನಿಮಾ ‘ಪದ್ಮಾವತ್’ (Padmaavat) ಬಿಡುಗಡೆಯಾಗಿ ವರ್ಷಗಳೇ ಕಳೆದಿದ್ದರೂ, ಅದರ ‘ಜೋಹರ್’ (Jauhar) ದೃಶ್ಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ನೀಡಿರುವ ಹೇಳಿಕೆ ಇದೀಗ ಮತ್ತೆ ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಟಿ ಸ್ವರಾ ಭಾಸ್ಕರ್ ಅವರ ಹೇಳಿಕೆಯನ್ನು ನಟ ರಣವೀರ್ ಶೋರೆ (Ranvir Shorey) ತೀವ್ರವಾಗಿ ಖಂಡಿಸಿದ್ದು, ಅವರನ್ನು “ಸಂಪೂರ್ಣ ನಿರ್ಲಜ್ಜರು” ಎಂದು ಜರೆದಿದ್ದಾರೆ.

ಸ್ವರಾ ಭಾಸ್ಕರ್ ಹೇಳಿದ್ದೇನು?:

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವರಾ ಭಾಸ್ಕರ್, “ಪದ್ಮಾವತ್ ಸಿನಿಮಾ ನೋಡಿದ ನಂತರ ನಾನು ಸಂಜಯ್ ಲೀಲಾ ಭನ್ಸಾಲಿ ಅವರಿಗೆ ಬಹಿರಂಗ ಪತ್ರ ಬರೆದಿದ್ದೆ. ದೇವರಿಲ್ಲದಿದ್ದರೆ, ನಾನೇನಾದರೂ ಲೈಂಗಿಕ ದೌರ್ಜನ್ಯಕ್ಕೊಳಗಾದ (Rape Survivor) ಸಂತ್ರಸ್ತೆಯಾಗಿದ್ದರೆ, ಈ ಸಿನಿಮಾ ನನಗೆ ಏನು ಸಂದೇಶ ನೀಡುತ್ತಿದೆ? ನನ್ನ ಆತ್ಮಗೌರವ ಉಳಿಸಿಕೊಳ್ಳಲು ನಾನು ಆತ್ಮಹತ್ಯೆ ಮಾಡಿಕೊಳ್ಳದೆ ಹೇಡಿಯಾದೆ ಎಂದು ನನಗನ್ನಿಸುತ್ತಿತ್ತು. ಈಗಾಗಲೇ ಲೈಂಗಿಕ ದೌರ್ಜನ್ಯಗಳ ಹೆಚ್ಚಳವಿರುವ ನಮ್ಮ ಸಮಾಜಕ್ಕೆ ನಾವು ಏನು ಹೇಳಲು ಹೊರಟಿದ್ದೇವೆ? ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ ಜೀವಂತವಾಗಿದ್ದರೆ ಗೌರವವಿಲ್ಲವೇ? ಆ ಸೀನ್ ಅತ್ಯಂತ ಸಮಸ್ಯಾತ್ಮಕವಾಗಿತ್ತು” ಎಂದು ಹೇಳಿದ್ದರು.

ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸ್ವರಾ, “ನಾನು ರಾಣಿ ಪದ್ಮಾವತಿ ಅಥವಾ ಅರಮನೆಯ ಇತರ ಮಹಿಳೆಯರನ್ನು ಹೇಡಿಗಳು ಎಂದು ಕರೆದಿಲ್ಲ. ನಾನು ನನ್ನ ದೃಷ್ಟಿಕೋನದಿಂದ ಹೇಳಿದ್ದಷ್ಟೇ” ಎಂದಿದ್ದಾರೆ.

ಸ್ವರಾಗೆ ನಟ ರಣವೀರ್ ಶೋರೆ ಖಡಕ್ ತಿರುಗೇಟು:

ಸ್ವರಾ ಭಾಸ್ಕರ್ ಅವರ ಹೇಳಿಕೆಯ ವೀಡಿಯೋ ಶೇರ್ ಮಾಡಿ ‘X’ (ಟ್ವಿಟರ್) ನಲ್ಲಿ ಕಿಡಿಕಾರಿರುವ ನಟ ರಣವೀರ್ ಶೋರೆ, “ನನಗೆ ಇಂದಿಗೂ ಅರ್ಥವಾಗುತ್ತಿಲ್ಲ! ಜೋಹರ್ (ಬಾಹ್ಯ ದಾಳಿ, ನಿರಂತರ ಅತ್ಯಾಚಾರ ಮತ್ತು ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಬೆಂಕಿಗೆ ಹಾರಿ ಪ್ರಾಣತ್ಯಾಗ ಮಾಡುವುದು) ಕೃತ್ಯವನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಹೋಲಿಸುವುದೇ? ಎರಡಕ್ಕೂ ಎಲ್ಲಿಯ ಸಂಬಂಧ? ಇವೆರಡೂ ಸಂಪೂರ್ಣ ಭಿನ್ನವಾದ ಸನ್ನಿವೇಶಗಳು. ಒಂದು ವರ್ಗವನ್ನು ಕೆಟ್ಟದಾಗಿ ಬಿಂಬಿಸಿ, ಇನ್ನೊಂದನ್ನು ಸಮರ್ಥಿಸಿಕೊಳ್ಳುವುದೇ ಇವರ ಏಕೈಕ ಉದ್ದೇಶ. ಇದು ಸಂಪೂರ್ಣ ನಿರ್ಲಜ್ಜತನ!” ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನಟ ‘ದುನಿಯಾ’ ವಿಜಯ್ ಹಾಗೂ ನಾಗರತ್ನ ದಾಂಪತ್ಯ ಅಂತ್ಯ: ವಿಚ್ಛೇದನ ಮಂಜೂರು, 2 ಕೋಟಿ ರೂ. ಜೀವನಾಂಶ ಪಾವತಿಗೆ ಹೈಕೋರ್ಟ್ ಆದೇಶ

ಜೋಹರ್ ದೃಶ್ಯವನ್ನು ಸಮರ್ಥಿಸಿಕೊಂಡ ಲೇಖಕ:

ವಿವಾದದ ಕುರಿತು ಪ್ರತಿಕ್ರಿಯಿಸಿರುವ ಪದ್ಮಾವತ್ ಸಿನಿಮಾದ ಸಹ-ಲೇಖಕ ಪ್ರಕಾಶ್ ಕಪಾಡಿಯಾ, “ನಾವು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿರುವ ಸತ್ಯಾಂಶ ಮತ್ತು ಸಂಶೋಧನೆಯ ಆಧಾರದ ಮೇಲೆಯೇ ಸಿನಿಮಾ ಮಾಡಿದ್ದೇವೆ. ಜೋಹರ್ ಸೀನ್ ಎಂಬುದು ಆ ಕಾಲದಲ್ಲಿದ್ದ ವಾಸ್ತವ ಸ್ಥಿತಿ. ಅದನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ. ಅದು ‘ಮಾಡೂ ಇಲ್ಲವೇ ಮಡಿ’ ಸನ್ನಿವೇಶವಾಗಿತ್ತು. ಪ್ರೇಕ್ಷಕರು ಯಾವ ಮನಸ್ಥಿತಿಯಲ್ಲಿ ಸಿನಿಮಾ ನೋಡುತ್ತಾರೆ ಎಂಬುದರ ಮೇಲೆ ಅವರ ಅಭಿಪ್ರಾಯ ನಿರ್ಧಾರವಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *