Breaking News

ಜಮ್ಮು ಮತ್ತು ಕಾಶ್ಮೀರದ ಯೂಸ್‌ಮಾರ್ಗ್‌ನಲ್ಲಿ ಸಶಸ್ತ್ರ ಪಡೆ-ಭಯೋತ್ಪಾದಕರ ನಡುವೆ ಭೀಕರ ಗುಂಡಿನ ಚಕಮಕಿ

ದೆಹಲಿ : ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯ ಯೂಸ್‌ಮಾರ್ಗ್ (Yousmarg) ಪ್ರದೇಶದ ಪೀರ್‌ಪಂಜಾಲ್ ಪರ್ವತ ಶ್ರೇಣಿಯಲ್ಲಿ ಭದ್ರತಾ ಪಡೆಗಳು ಹಾಗೂ ಅಡಗಿರುವ ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ (Encounter) ನಡೆದಿದೆ. ಘಟನೆಯ ಬೆನ್ನಲ್ಲೇ ಭದ್ರತಾ ಪಡೆಗಳು ಬೃಹತ್ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿವೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆಯನ್ನು ದೃಢಪಡಿಸಿದ್ದು, ಈ ಪ್ರದೇಶದಲ್ಲಿ ಎನ್‌ಕೌಂಟರ್ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

“ನಾವು ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ. ಈ ವೇಳೆ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿವೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ,” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರು ಕಡಿದಾದ ಪರ್ವತ ಹಾಗೂ ದಟ್ಟ ಅರಣ್ಯದ ಭಾಗಗಳಲ್ಲಿ ಅಡಗಿಕೊಂಡಿದ್ದಾರೆ ಎಂಬ ಶಂಕೆಯಿದ್ದು, ಅವರನ್ನು ಮಟ್ಟಹಾಕಲು ಉನ್ನತ ಮಟ್ಟದ ‘ಜಂಗಲ್ ವಾರ್‌ಫೇರ್’ (Jungle Warfare) ತರಬೇತಿ ಪಡೆದ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ.

ಪೀರ್‌ಪಂಜಾಲ್ ಪರ್ವತ ಶ್ರೇಣಿಯಲ್ಲಿ ಉಗ್ರರ ಚಟುವಟಿಕೆಗಳು ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ, ಕಳೆದ ವಾರವಷ್ಟೇ ಜಮ್ಮು-ಕಾಶ್ಮೀರ ಮಹಾನಿರ್ದೇಶಕ (DGP) ನಳಿನ್ ಪ್ರಭಾತ್ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ಪರಿಶೀಲನೆ ನಡೆಸಿದ್ದರು. ಅರಣ್ಯ ಯುದ್ಧದಲ್ಲಿ ನರಿ ತಂತ್ರದ ತರಬೇತಿ ಪಡೆದಿರುವ ಉಗ್ರರು ಇಲ್ಲಿ ಅಡಗಿರುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಈ ಕಾರ್ಯತಂತ್ರ ರೂಪಿಸಲಾಗಿತ್ತು.

ಇದನ್ನೂ ಓದಿ: ಸವಣಾಲು ಮತ್ತು ಅಚ್ಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆಗಳು: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಕಳೆದ ವರ್ಷದ ‘ಆಪರೇಷನ್ ಸಿಂಧೂರ್’ (Operation Sindoor) ನಂತರ ಕಣಿವೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರ ನುಸುಳುವಿಕೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಆದಾಗ್ಯೂ, ಕಳೆದ ಜುಲೈನಲ್ಲಿ ನಡೆದ ಘಟನೆಗಳ ನಂತರ ಭದ್ರತಾ ಪಡೆಗಳು ಇಡೀ ಕಾಶ್ಮೀರದಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿ ೩,೦೦೦ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದವು. ಇದೀಗ ಯೂಸ್‌ಮಾರ್ಗ್‌ನಲ್ಲಿ ನಡೆದಿರುವ ಎನ್‌ಕೌಂಟರ್ ಕಣಿವೆಯಲ್ಲಿ ಮತ್ತೆ ಭದ್ರತಾ ಪಡೆಗಳನ್ನು ಹೈ-ಅಲರ್ಟ್‌ನಲ್ಲಿರಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *