Breaking News

ನೀರಿನ ಅಡಿಯಲ್ಲಿ ಅಡಗಿದ್ದ ರೌಡಿಶೀಟರ್ ‘ಕರಿಯಾ’ ಸಿಕ್ಕಿಬಿದ್ದ ರೋಚಕ ಕಥೆ

ಭದ್ರಾವತಿ; ಮಹಾಭಾರತದಲ್ಲಿ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಜಲಸ್ತಂಭನ ವಿದ್ಯೆ ಬಳಸಿ ಅಡಗಿಕುಳಿತಿದ್ದ ಪ್ರಸಂಗ ಎಲ್ಲರಿಗೂ ತಿಳಿದಿದೆ. ಅದೇ ತಂತ್ರವನ್ನು ಅನುಕರಿಸಿ ಪೊಲೀಸರ ಕಣ್ಣಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ರೌಡಿಶೀಟರ್ ಒಬ್ಬ ಕೊನೆಗೂ ಪೊಲೀಸರ ಸಾಹಸಮಯ ಕಾರ್ಯಾಚರಣೆಗೆ ಸಿಕ್ಕಿಬಿದ್ದ ಸಿನಿಮಾ ಮಾದರಿಯ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ದಿಲೀಪ್ ಅಲಿಯಾಸ್ ಕರಿಯಾ (೨೧) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಳವು, ಕೊಲೆ ಯತ್ನ ಸೇರಿದಂತೆ ಒಟ್ಟು 16 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯವು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕರಿಯಾನ ವಿರುದ್ಧ ಮೂರು ಬಾರಿ ಜಾಮೀನು ರಹಿತ ವಾರಂಟ್ (NBW) ಜಾರಿ ಮಾಡಿದ್ದರೂ ಈತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಸೆಪ್ಟೆಂಬರ್ 2ರಂದು ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಆರೋಪಿ ಭಂಡಾರಹಳ್ಳಿ (Bhandarahalli) ಭಾಗದ ಹಳ್ಳದ ಬಳಿ ಇರುವ ಮಾಹಿತಿ ಲಭ್ಯವಾಗಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ದಾಳಿ ನಡೆಸಿದಾಗ ಆರೋಪಿ ಎಲ್ಲೂ ಕಾಣಿಸಲಿಲ್ಲ. ಆದರೆ ಹಳ್ಳದ ನೀರಿನಲ್ಲಿದ್ದ ಜೊಂಡಿನ ಗಿಡಗಳ ಭಾಗದಲ್ಲಿ ಸಣ್ಣ ಚಲನವಲನ ಹಾಗೂ ನೀರಿನೊಳಗಿನಿಂದ ಗಾಳಿಯ ಗುಳ್ಳೆಗಳು (Bubbles) ಮೇಲೆ ಬರುತ್ತಿರುವುದನ್ನು ಪಿಎಸ್‌ಐ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಗಮನಿಸಿದರು.

ಇದನ್ನೂ ಓದಿ: ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಪ್ರಶಂಸೆ, ಬೆಂಬಲಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ

ತಕ್ಷಣ ಧೈರ್ಯದಿಂದ ನೀರಿಗಿಳಿದ ಪೊಲೀಸರು, ನೀರಿನ ಅಡಿಯಲ್ಲಿ ಮುಖ ಮುಳುಗಿಸಿ ಅಡಗಿದ್ದ ಕರಿಯಾನನ್ನು ಸುತ್ತುವರೆದು ನೀರಿನಲ್ಲೇ ಕೋಳ (Handcuff) ತೊಡಿಸಿ ದಡಕ್ಕೆ ಎಳೆದು ತಂದಿದ್ದಾರೆ. ವಿಚಾರಣೆ ವೇಳೆ “ನೀರಿನಲ್ಲಿ ಅಡಗಿಕೊಳ್ಳುವ ಆಲೋಚನೆ ಹೇಗೆ ಬಂತು?” ಎಂದು ಪೊಲೀಸರು ಕೇಳಿದಾಗ, ಮಹಾಭಾರತದ ದುರ್ಯೋಧನನ ಕಥೆಯಿಂದ ಪ್ರೇರಣೆ ಪಡೆದು ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ತಂತ್ರ ರೂಪಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ. ನ್ಯೂಟೌನ್ ಠಾಣೆಯ ಪಿಎಸ್‌ಐ ರಮೇಶ್, ಸಿಬ್ಬಂದಿ ಪ್ರಸನ್ನ, ಗಂಗಾಧರ ಹಾಗೂ ಹಾಲಪ್ಪ ಅವರ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *