ಮುಂಬೈ : ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ಜಾಗತಿಕ ಏಕತೆಯ ಕುರಿತು ಮಾತನಾಡಿದ ಬೆನ್ನಲ್ಲೇ, ವಿಶ್ವ ಹಿಂದೂ ಪರಿಷತ್ (VHP) ಮಹಾರಾಷ್ಟ್ರದಾದ್ಯಂತ ನಡೆಯಲಿರುವ ನವರಾತ್ರಿ ಉತ್ಸವದ ಕಾರ್ಯಕ್ರಮಗಳಲ್ಲಿ ಪ್ರಮುಖ ಹಾಗೂ ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ.
ನವರಾತ್ರಿ ಆಚರಣೆಯ ಭಾಗವಾಗಿ 10 ದಿನಗಳ ಕಾಲ ನಡೆಯುವ ಸಾಂಪ್ರದಾಯಿಕ ಗರಬಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ವಿಎಚ್ಪಿ ನಿರ್ಧರಿಸಿದೆ.
ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಗುರುತು ಖಚಿತಪಡಿಸಿಕೊಳ್ಳಲು ಆಯೋಜಕರಿಗೆ ವಿಎಚ್ಪಿ ‘ಮಾಡಬೇಕಾದ ಮತ್ತು ಮಾಡಬಾರದ’ ನಿಯಮಗಳ (Do’s and Don’ts) ಪಟ್ಟಿಯನ್ನು ಬಿಡುಗಡೆ ಮಾಡಿದೆ:
ಆಧಾರ್ ಕಾರ್ಡ್ ಪರಿಶೀಲನೆ: ಗರಬಾ ಅಂಕಣಕ್ಕೆ ಆಗಮಿಸುವ ಪ್ರತಿಯೊಬ್ಬರ ಆಧಾರ್ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು.
ಹಣೆಗೆ ತಿಲಕ ಇಡುವುದು: ಪ್ರವೇಶ ದ್ವಾರದಲ್ಲೇ ಹಿಂದೂ ಗುರುತನ್ನು ಖಚಿತಪಡಿಸಿಕೊಳ್ಳಲು ಭಾಗವಹಿಸುವವರ ಹಣೆಗೆ ಕಡ್ಡಾಯವಾಗಿ ತಿಲಕ ಹಚ್ಚಬೇಕು.
ಇದನ್ನೂ ಓದಿ: ಸವಣಾಲು ಮತ್ತು ಅಚ್ಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆಗಳು: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
“ಮೂರ್ತಿ ಪೂಜೆ ವಿರೋಧಿಸುವವರು ಹಬ್ಬಕ್ಕೆ ಏಕೆ ಬರಬೇಕು?”: VHP ಪ್ರಶ್ನೆ
ಮಹಾರಾಷ್ಟ್ರದಾದ್ಯಂತ ಈ ನಿಯಮ ಜಾರಿಗೊಳಿಸಿರುವ ಕುರಿತು ಮಾತನಾಡಿದ ವಿಎಚ್ಪಿ ರಾಷ್ಟ್ರೀಯ ವಕ್ತಾರ ಹಾಗೂ ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್, “ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಗರಬಾ-ದಾಂಡಿಯಾ ನೃತ್ಯದಲ್ಲಿ ಮುಸ್ಲಿಮರ ಭಾಗವಹಿಸುವಿಕೆಗೆ ಅವಕಾಶ ನೀಡದಿರಲು ನಾವು ನಿರ್ಧರಿಸಿದ್ದೇವೆ,” ಎಂದು ತಿಳಿಸಿದ್ದಾರೆ.
ಮೂಲತಃ ನವರಾತ್ರಿ ಆಚರಣೆಯು ಕೇವಲ ಹಾಡು ಮತ್ತು ನೃತ್ಯಕ್ಕೆ ಸೀಮಿತವಾಗಿಲ್ಲ, ಇದು ದುರ್ಗಾದೇವಿಯ ಪವಿತ್ರ ಆರಾಧನೆಯಾಗಿದೆ. ಮೂರ್ತಿ ಪೂಜೆಯನ್ನು ಮೂಲಭೂತವಾಗಿ ವಿರೋಧಿಸುವವರು ಈ ಧಾರ್ಮಿಕ ಹಬ್ಬದಲ್ಲಿ ಏಕೆ ಭಾಗವಹಿಸಬೇಕು? ನವರಾತ್ರಿ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ಪ್ರವೇಶ ನಿರಾಕರಿಸಿದ ಮಾತ್ರಕ್ಕೆ ವಿಎಚ್ಪಿ ಯಾವುದೇ ಸಮುದಾಯದ ವಿರುದ್ಧವಾಗಿದೆ ಎಂದರ್ಥವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

