ಬೆಂಗಳೂರು: ಸಾಲು ಸಾಲು ರಜೆಗಳೊಂದಿಗೆ ಆಗಮಿಸುತ್ತಿರುವ ಪ್ರಸಕ್ತ ಸಾಲಿನ ಗೌರಿ-ಗಣೇಶ ಹಬ್ಬದ (Gowri Ganesha Festival) ಪ್ರಯುಕ್ತ ತಮ್ಮ ಸ್ವಂತ ಊರುಗಳಿಗೆ ತೆರಳುವ ಸಾರ್ವಜನಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರಿನಿಂದ ರಾಜ್ಯದ ನಾನಾ ಭಾಗಗಳಿಗೆ ಒಟ್ಟು 2,400 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲು ಸಂಸ್ಥೆ ತೀರ್ಮಾನಿಸಿದೆ.
ಸೆಪ್ಟೆಂಬರ್ 12(ಶನಿವಾರ) ಮತ್ತು ಸೆಪ್ಟೆಂಬರ್ ೧೩ (ಭಾನುವಾರ) ವಾರಾಂತ್ಯದ ರಜೆಗಳಾಗಿದ್ದು, ಸೆಪ್ಟೆಂಬರ್ ೧೪ರಂದು ವಿನಾಯಕ ಚತುರ್ಥಿ ಆಚರಣೆ ಇರಲಿದೆ. ಹೀಗಾಗಿ ಸತತ ರಜೆಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ರಾಜಧಾನಿಯಿಂದ ಊರುಗಳತ್ತ ಮುಖ ಮಾಡಲಿದ್ದಾರೆ.
ಸೆಪ್ಟೆಂಬರ್ 11 ರಿಂದ 13 ರವರೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ.
ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ಸೆಪ್ಟೆಂಬರ್ ೧೪ ರಿಂದ ರಾಜ್ಯದ ವಿವಿಧ ಸ್ಥಳಗಳಿಂದ ಹಾಗೂ ಅಂತರರಾಜ್ಯಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಯಾವೆಲ್ಲಾ ಮಾರ್ಗಗಳಲ್ಲಿ ವಿಶೇಷ ಬಸ್ ಸಂಚಾರ?:
ರಾಜ್ಯದ ಪ್ರಮುಖ ನಗರಗಳಿಗೆ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ವಿಜಯಪುರ, ಕಲಬುರಗಿ, ಮೈಸೂರು ಹಾಗೂ ಉತ್ತರ ಕರ್ನಾಟಕದ ಪ್ರಮುಖ ಭಾಗಗಳಿಗೆ ಬಸ್‌ಗಳು ಲಭ್ಯವಿರಲಿವೆ.
ಅಂತರರಾಜ್ಯ ಮಾರ್ಗಗಳು: ತಿರುಪತಿ, ವಿಜಯವಾಡ, ಹೈದರಾಬಾದ್, ಚೆನ್ನೈ, ಕೊಯಮತ್ತೂರು, ಊಟಿ ಹಾಗೂ ಪಣಜಿ ನಗರಗಳಿಗೂ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಪ್ರಶಂಸೆ, ಬೆಂಬಲಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಕರೆ
ಮುಂಗಡ ಬುಕಿಂಗ್‌ಗೆ ಆಕರ್ಷಕ ರಿಯಾಯಿತಿ :
ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಟಿಕೆಟ್ ಮುಂಗಡ ಕಾಯ್ದಿರಿಸಬಹುದು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಂದೇ ಟಿಕೆಟ್‌ನಲ್ಲಿ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5 ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಮರಳುವ ಪ್ರಯಾಣದ ದರದಲ್ಲಿ ಶೇಕಡಾ 10 ರಿಯಾಯಿತಿ ದೊರೆಯಲಿದೆ.
ಖಾಸಗಿ ಬಸ್ ಮಾಫಿಯಾ ಹಾಗೂ ದುಬಾರಿ ದರ ಸುಲಿಗೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ ಸುರಕ್ಷಿತವಾಗಿ ಪ್ರಯಾಣಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

