ಗೌರಿ-ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತದೆ. ಇದೀಗ ನೆಟ್ಟಿಗರೊಬ್ಬರು ಮನೆಯಲ್ಲಿಯೇ ಇರುವ ಅಡುಗೆ ಮನೆಯ ಪದಾರ್ಥಗಳನ್ನು ಬಳಸಿ ಅತ್ಯಂತ ಸುಲಭ ಹಾಗೂ ಸುಂದರವಾದ ‘ಇಕೋ-ಫ್ರೆಂಡ್ಲಿ’ ಗಣೇಶ ಮೂರ್ತಿಯನ್ನು ತಯಾರಿಸುವ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
“ಕಳೆದ ವರ್ಷ ನಾನು ಅರಿಶಿನ, ಮೈದಾ ಹಾಗೂ ಸಕ್ಕರೆ ಬಳಸಿ ಗಣಪತಿ ಮೂರ್ತಿ ಮಾಡಿದ್ದೆ. ಈ ವರ್ಷ ನೀವೂ ಇದನ್ನು ಪ್ರಯತ್ನಿಸಲಿ ಎಂದು ಮುಂಚಿತವಾಗಿಯೇ ಹಂಚಿಕೊಳ್ಳುತ್ತಿದ್ದೇನೆ. ಯಾವುದೇ ದುಬಾರಿ ವಸ್ತುವಿನ ಅಗತ್ಯವಿಲ್ಲ, ಸ್ವಲ್ಪ ತಾಳ್ಮೆ ಹಾಗೂ ಅಪಾರ ಪ್ರೀತಿ ಇದ್ದರೆ ಸಾಕು,” ಎಂದು ಅವರು ವೀಡಿಯೋಗೆ ಕ್ಯಾಪ್ಷನ್ ಬರೆದಿದ್ದಾರೆ.
ಮನೆಯಲ್ಲೇ ಅರಿಶಿನ ಗಣಪತಿ ಮಾಡುವುದು ಹೇಗೆ?:
ಹಿಟ್ಟು ಸಿದ್ಧಪಡಿಸುವುದು: ಮೊದಲು ಅರಿಶಿನ, ಮೈದಾ ಹಿಟ್ಟು, ಸಕ್ಕರೆ ಪುಡಿ ಹಾಗೂ ನೀರನ್ನು ಸೇರಿಸಿ ಚಪಾತಿ ಹಿಟ್ಟಿನಂತೆ ಕಾದಿರಿಸಿಕೊಳ್ಳಿ.
ಚಮಚಗಳ ಸಹಾಯದಿಂದ ಆಕಾರ ನೀಡುವುದು: ಹಿಟ್ಟಿನಿಂದ ಗಣಪತಿಯ ದೇಹದ ಭಾಗಗಳನ್ನು ಮಾಡಲು ಮನೆಯಲ್ಲಿರುವ ಚಮಚಗಳು, ಸೂಪ್ ಸ್ಪೂನ್, ಸರ್ವಿಂಗ್ ಸ್ಪೂನ್ ಹಾಗೂ ಫೋರ್ಕ್ (Fork) ಬಳಸಬಹುದು.
ಕೈಗಳು, ಕಾಲುಗಳು ಹಾಗೂ ಸೊಂಡಿಲಿಗೆ ಸೂಪ್ ಸ್ಪೂನ್ ಬಳಸಿ.
ಹೊಟ್ಟೆಯ ಭಾಗಕ್ಕೆ ದುಂಡಗಿರುವ ಸರ್ವಿಂಗ್ ಸ್ಪೂನ್ ಬಳಸಿ ಹಿಟ್ಟನ್ನು ಸರಿಯಾಗಿ ಒತ್ತಿ ಆಕಾರ ನೀಡಿ.
ಮೂರ್ತಿ ಜೋಡಣೆ: ಸಿದ್ಧಪಡಿಸಿದ ಪ್ರತಿಯೊಂದು ಭಾಗವನ್ನು ಒಂದರ ಮೇಲೊಂದರಂತೆ ಜೋಡಿಸಿ ಗಣಪತಿಯ ಪೂರ್ಣ ಆಕಾರ ನೀಡಿ.
ಕಣ್ಣು ಹಾಗೂ ಅಂತಿಮ ಟಚ್: ಕೊನೆಯಲ್ಲಿ ಕಣ್ಣುಗಳನ್ನು ಬಿಡಿಸಿ, ಸಣ್ಣಪುಟ್ಟ ವಿನ್ಯಾಸಗಳನ್ನು ಮಾಡಿದರೆ ಹಳದಿ ಬಣ್ಣದ ಮನಮೋಹಕ ಗಣಪತಿ ಮೂರ್ತಿ ಸಿದ್ಧವಾಗುತ್ತದೆ.
ಮನೆಯಲ್ಲೇ ವಿಸರ್ಜನೆ ಮಾಡುವುದು ಹೇಗೆ?:
ಈ ಮೂರ್ತಿಯನ್ನು ಸಂಪೂರ್ಣವಾಗಿ ಸೇವಿಸಬಹುದಾದ ಆಹಾರದ ಪದಾರ್ಥಗಳಿಂದ ತಯಾರಿಸಿರುವುದರಿಂದ, ವಿಸರ್ಜನೆಗಾಗಿ ನದಿ ಅಥವಾ ಕೆರೆಗಳಿಗೆ ಹೋಗುವ ಅಗತ್ಯವಿಲ್ಲ.
ಸುಲಭ ವಿಸರ್ಜನೆ: ಮನೆಯಲ್ಲೇ ಒಂದು ಬಕೆಟ್ ಅಥವಾ ಟಬ್ ನೀರಿನಲ್ಲಿ ಮೂರ್ತಿಯನ್ನು ಮುಳುಗಿಸಿದರೆ ಕೆಲವೇ ನಿಮಿಷಗಳಲ್ಲಿ ಹಿಟ್ಟು ಕರಗುತ್ತದೆ.
ಗಿಡಗಳಿಗೆ ನೀರು: ಕರಗಿದ ಅರಿಶಿನ ಹಾಗೂ ಹಿಟ್ಟಿನ ನೀರನ್ನು ಮನೆಯಲ್ಲಿರುವ ಗಿಡ-ಮರಗಳಿಗೆ ಗೊಬ್ಬರವಾಗಿ ಎರೆಯಬಹುದು.
ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳಿಂದಾಗುವ ಅಪಾಯಗಳೇನು?:
ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಗಣೇಶ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿಂದ ತಯಾರಿಸಲಾಗುತ್ತದೆ.
PoP ನೀರಿನಲ್ಲಿ ಬೇಗ ಕರಗುವುದಿಲ್ಲ ಹಾಗೂ ಇವುಗಳಿಗೆ ಬಳಸುವ ರಾಸಾಯನಿಕ ಬಣ್ಣಗಳಲ್ಲಿ ಹಾನಿಕಾರಕ ಲೋಹಗಳಿರುತ್ತವೆ.
ನದಿ, ಕೆರೆ ಹಾಗೂ ಸಮುದ್ರಗಳಲ್ಲಿ ಇವುಗಳನ್ನು ವಿಸರ್ಜಿಸುವುದರಿಂದ ಜಲಚರಗಳಿಗೆ ತೀವ್ರ ಅಪಾಯ ಉಂಟಾಗುತ್ತದೆ ಮತ್ತು ಜಲ ಮಾಲಿನ್ಯ ಹೆಚ್ಚಾಗುತ್ತದೆ.
ಆದ್ದರಿಂದ ಈ ಬಾರಿ ಪರಿಸರ ಕಾಳಜಿಯೊಂದಿಗೆ ಮನೆಯಲ್ಲೇ ಸರಳ ಹಾಗೂ ಪರಿಸರ ಸ್ನೇಹಿ ಅರಿಶಿನ ಗಣಪತಿಯನ್ನು ಮಾಡಿ ಹಬ್ಬವನ್ನು ಸಂಭ್ರಮಿಸುವುದು ಸೂಕ್ತ.

