ದೆಹಲಿ: ದಕ್ಷಿಣ-ಪೂರ್ವ ದೆಹಲಿಯ ಕಿಲೋಕರಿ ಗ್ರಾಮದಲ್ಲಿ (ಆಶ್ರಮ ಬಳಿ) ತಮ್ಮ ಮನೆಯ ಹೊರಗೆ ಗಲಾಟೆ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ 54 ವರ್ಷದ ಮಣಿಪುರದ ಖ್ಯಾತ ಸಂಗೀತ ಶಿಕ್ಷಕರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಮೃತರನ್ನು ಚೋಂಗ್ಥಮ್ ವಿಕ್ರಮ್ ಸಿಂಗ್ (54) ಎಂದು ಗುರುತಿಸಲಾಗಿದೆ. ಇವರು ಮಣಿಪುರದ ಪಾಶ್ಚಿಮಾತ್ಯ (ವೆಸ್ಟರ್ನ್) ಸಂಗೀತ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸಿದ್ದರು.
ಮೃತರ ಮನೆಯ ಎದುರುಗಡೆ ಇದ್ದ ಧಾಬಾ ಸಿಬ್ಬಂದಿ ಹಾಗೂ ಡೆಲಿವರಿ ಬಾಯ್‌ಗಳು ಕುಡಿದು ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಲು ವಿಕ್ರಮ್ ಸಿಂಗ್ ಕೆಳಗೆ ಹೋದಾಗ ಅವರ ಮೇಲೆ ಗುಂಪು ಏಕಾಏಕಿ ಹಿಂಸಾತ್ಮಕ ದಾಳಿ ನಡೆಸಿ, ಕೈ ಮತ್ತು ಗುದ್ದಿನಿಂದ ತೀವ್ರವಾಗಿ ಥಳಿಸಿದೆ.ತೀವ್ರವಾಗಿ ಗಾಯಗೊಂಡಿದ್ದ ಸಿಂಗ್ ಅವರನ್ನು ಅವರ ಮಗ ಯೈಫಾಬಾ ತಕ್ಷಣ ‘ಹೋಲಿ ಫ್ಯಾಮಿಲಿ’ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
Deeply saddened by the tragic passing of renowned Manipuri guitarist and Western music pioneer, Shri Chongtham Vikram Singh, and deeply concerned by the incident in which he was allegedly assaulted near his residence in southeast Delhi.
Shri Vikram Singh’s invaluable… pic.twitter.com/MH49Pcdh8A
— N. Biren Singh (@NBirenSingh) September 7, 2026
ಸನ್‌ಲೈಟ್ ಕಲೋನಿ ಪೊಲೀಸ್ ಠಾಣೆಗೆ ಸೆಪ್ಟೆಂಬರ್ 7ರಂದು ಮಾಹಿತಿ ಬಂದಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧಾಬಾ ಸಿಬ್ಬಂದಿ ಹಾಗೂ ಅಪ್ರಾಪ್ತನೂ ಸೇರಿದಂತೆ ಹಲವು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೃತರಾದ ವಿಕ್ರಮ್ ಸಿಂಗ್ ಅವರು ‘ಅಲ್ಟ್ರಾ ವೈರಸ್’, ‘ಫೀನಿಕ್ಸ್’ ಮತ್ತು ‘ಈಸ್ಟರ್ನ್ ಡಾರ್ಕ್’ ನಂತಹ ಪ್ರಸಿದ್ಧ ಬ್ಯಾಂಡ್‌ಗಳ ಜೊತೆ ಗಿಟಾರ್ ವಾದಕರಾಗಿ ಕಾರ್ಯನಿರ್ವಹಿಸಿದ್ದರು. ಇವರು ಮಣಿಪುರದ ಖ್ಯಾತ ಗಾಯಕಿ ಚೋಂಗ್ಥಮ್ ಕಮಲಾ ಅವರ ಹಿರಿಯ ಮಗ.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ‘ಕೆಎಸ್‌ಆರ್‌ಟಿಸಿ’ ಬಿಗ್ ಆಫರ್: ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ
ಈ ದೌರ್ಜನ್ಯವನ್ನು ಖಂಡಿಸಿ ದೆಹಲಿಯ ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ಸಂಘಟನೆಗಳು (NESSDU) ಹಾಗೂ ನಾಗರಿಕ ಸಂಸ್ಥೆಗಳು ಸನ್‌ಲೈಟ್ ಕಲೋನಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿವೆ. ಇದು ಜನಾಂಗೀಯ ದ್ವೇಷದ ದಾಳಿಯೇ ಎಂಬ ಅನುಮಾನಗಳನ್ನು ಸಮುದಾಯದ ಮುಖಂಡರು ವ್ಯಕ್ತಪಡಿಸಿದ್ದು, ಪೊಲೀಸರು ಸದ್ಯಕ್ಕೆ ಅಂತಹ ಯಾವುದೇ ಕಾರಣಗಳು ದೃಢಪಟ್ಟಿಲ್ಲ, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

