ಗದಗ: ಆಗತಾನೇ ಜನ್ಮತಾಳಿದ ಹಸುಗೂಸನ್ನು ಕರುಳಬಳ್ಳಿ ಸಮೇತ ಮುಳ್ಳಿನ ಕಂಟಿಯಲ್ಲಿ ಎಸೆದು ಹೋದ ಅಮಾನವೀಯ ಘಟನೆಯೊಂದು ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ನಡೆದಿದೆ. ಚಿಕ್ಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಸಮೀಪವಿರುವ ಮುಳ್ಳಿನ ಕಂಟಿಯಲ್ಲಿ ದುರುಳರು ನವಜಾತ ಗಂಡು ಶಿಶುವನ್ನು ಎಸೆದು ಪರಾರಿಯಾಗಿದ್ದರು. ಮುಳ್ಳಿನ ನಡುವೆ ಬಿದ್ದಿದ್ದ ಮಗುವಿನ ಅಳುವಿನ ಸದ್ದು ಕೇಳಿದ ತಕ್ಷಣವೇ ಜಾಗೃತರಾದ ಸ್ಥಳೀಯ ಗ್ರಾಮಸ್ಥರು, ಹತ್ತಿರ ತೆರಳಿ ನೋಡಿದಾಗ ರಕ್ತಸಿಕ್ರತ ಸ್ಥಿತಿಯಲ್ಲಿದ್ದ ಗಂಡು ಮಗು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಮಗುವನ್ನು ಜಾಗರೂಕತೆಯಿಂದ ರಕ್ಷಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬೆಟಗೇರಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಅಂಬ್ಯುಲೆನ್ಸ್ ಮೂಲಕ ಶಿಶುವನ್ನು ಗದಗ ಜಿಮ್ಸ್ (GIMS) ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಸ್ತುತ ಮಗುವಿಗೆ ಜಿಮ್ಸ್ ಆಸ್ಪತ್ರೆಯ ವೈದ್ಯರು ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ನೀಡುತ್ತಿದ್ದು, ಮಗುವಿನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗದಗದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ‘ಇದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ಪೋಷಕರ ಗಂಭೀರ ಆರೋಪ
ಈ ಸಂಬಂಧ ಗದಗದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಎಸೆದು ಹೋದ ನಿರ್ದಯಿ ಪೋಷಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

