ಶಿವಮೊಗ್ಗದಲ್ಲಿ ಭಾರಿ ಅಡ್ಡಾದಿಡ್ಡಿ ಕೆಮಿಕಲ್ ಅಡಿಕೆ ಜಾಲ ಭೇದಿಸಿದ ಅಧಿಕಾರಿಗಳು: ‘ಕ್ಯಾನ್ಸರ್’ ತರಿಸುವ ಅಪಾಯಕಾರಿ ಬಣ್ಣ ಹಚ್ಚಿ ಮೋಸ

ಶಿವಮೊಗ್ಗ: ಕಡಿಮೆ ದರ್ಜೆಯ ಹಾಗೂ ಕೆಟ್ಟ ಅಡಿಕೆಗೆ ಪ್ರಾಣಾಂತಿಕ ರಸಾಯನಿಕ ಬಣ್ಣಗಳನ್ನು ಬಳಸಿ ರಾಜ್ಯ ಮತ್ತು ಹೊರರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದ ಬೃಹತ್ ಅಕ್ರಮ ಜಾಲವನ್ನು ಶಿವಮೊಗ್ಗ ಜಿಲ್ಲಾಡಳಿತ ಯಶಸ್ವಿಯಾಗಿ ಪತ್ತೆ ಹಚ್ಚಿದೆ. ಶಿವಮೊಗ್ಗ ನಗರದ ಹೊರವಲಯದ ಬುಳ್ಳಾಪುರದಲ್ಲಿರುವ ಅಡಿಕೆ ಗೋಡೌನ್ ಮೇಲೆ ಉಪವಿಭಾಗಾಧಿಕಾರಿ (AC) ಡಾ. ಮೈತ್ರಿ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೆಟ್ಟ ಹಾಗೂ ಗುಣಮಟ್ಟವಿಲ್ಲದ ಅಡಿಕೆಗೆ ಆಕರ್ಷಕ ನೋಟ ನೀಡಲು ಅಪಾಯಕಾರಿ ಕೈಗಾರಿಕಾ ರಸಾಯನಿಕ ಬಣ್ಣಗಳನ್ನು (Industrial Dyes) ಬಳಸಲಾಗುತ್ತಿದ್ದು, ಈ ಕುರಿತು ಜಿಲ್ಲಾಡಳಿತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ದಾಳಿಯ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡಿಕೆಗೆ ‘ರೋಡಮೈನ್ ಬಿ’ ಹಾಗೂ ‘ಸುಡಾನ್’ ಎಂಬ ಮಾರಕ ರಸಾಯನಿಕ ಬಣ್ಣಗಳನ್ನು ಹಚ್ಚುತ್ತಿರುವುದು ಕಂಡುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ರಸಾಯನಿಕ ಬಣ್ಣಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ. ರಸಾಯನಿಕ ಮಿಶ್ರಿತ ಅಡಿಕೆ ಸೇವನೆಯಿಂದ ಬಾಯಿ ಕ್ಯಾನ್ಸರ್, ಹೊಟ್ಟೆ ಹುಣ್ಣು ಹಾಗೂ ತೀವ್ರ ರೀತಿಯ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚಿಸಿದ ಹೈಕೋರ್ಟ್

ಈ ಕೆಮಿಕಲ್ ಬಣ್ಣಗಳು ನೇರವಾಗಿ ದೇಹವನ್ನು ಸೇರುವುದರಿಂದ ಯಕೃತ್ತು ಹಾಗೂ ಮೂತ್ರಪಿಂಡಕ್ಕೆ ಶಾಶ್ವತ ಹಾನಿಯುಂಟಾಗುವ ಸಾಧ್ಯತೆಯಿದೆ. ಆಹಾರ ಪದಾರ್ಥಗಳಿಗೆ ಅಥವಾ ಸೇವಿಸುವ ಅಡಿಕೆಗೆ ಯಾವುದೇ ರೀತಿಯ ಕೈಗಾರಿಕಾ ಬಣ್ಣ ಬಳಸುವುದು ಸಂಪೂರ್ಣ ಕಾನೂನುಬಾಹಿರ ಹಾಗೂ ಅಪರಾಧವಾಗಿದೆ ಎಂದು ಎಸಿ ಡಾ. ಮೈತ್ರಿ ಎಚ್ಚರಿಸಿದ್ದಾರೆ.

ಅಡಿಕೆ ಒಣಗಿಸುವ ಹಾಗೂ ಸಂಸ್ಕರಿಸುವ ನೆಪದಲ್ಲಿ ಗ್ರಾಹಕರ ಜೀವನದ ಜೊತೆ ಚೆಲ್ಲಾಟವಾಡುವ ಮತ್ತು ಅಕ್ರಮವಾಗಿ ರಸಾಯನಿಕ ಬಣ್ಣ ಬಳಸುವ ವರ್ತಕರು ಹಾಗೂ ಗೋಡೌನ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟ ಸಂದೇಶ ನೀಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *