ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ (Veterinary Officers) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಆದೇಶ ಹೊರಡಿಸಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಹೈಕೋರ್ಟ್ ಪೀಠ ಆದೇಶಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಹೈಕೋರ್ಟ್ ಪೀಠವು ಈ ಐತಿಹಾಸಿಕ ಆದೇಶವನ್ನು ನೀಡಿ, ಹಗರಣದ ಬೇರುಗಳನ್ನು ತಲುಪಿ ಸತ್ಯಾಸತ್ಯತೆ ಹೊರತರುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.

ಎಸ್‌ಐಟಿಗೆ ಹಿರಿಯ ಅನುಭವಿ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತಂಡದ ಸ್ವರೂಪ ಹೀಗಿದೆ: ತಂಡದ ಮುಖ್ಯಸ್ಥರಾಗಿ ಅಲೋಕ್ ಕುಮಾರ್ ನೇಮಕ ಮಾಡಲಾಗಿದೆ. ಈ ತಂಡದಲ್ಲಿ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ ಹಾಗೂ ಶಮ್ಮಾ ಮಿಶ್ರಾ ಇರಲಿದ್ದಾರೆ. 100 ದಿನಗಳ ಗಡುವು: ಎಸ್‌ಐಟಿ ಮುಂದಿನ 100 ದಿನಗಳಲ್ಲಿ ಸಂಪೂರ್ಣ ತನಿಖೆ ನಡೆಸಿ ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಬೇಕು.

ತನಿಖೆಯ ಪಾರದರ್ಶಕತೆಗಾಗಿ ಪ್ರತಿ 30 ದಿನಗಳಿಗೊಮ್ಮೆ (ತಿಂಗಳಿಗೊಮ್ಮೆ) ತನಿಖಾ ಪ್ರಗತಿ ವರದಿಯನ್ನು (Progress Report) ಕೋರ್ಟ್‌ಗೆ ಸಲ್ಲಿಸುವುದು ಕಡ್ಡಾಯ. ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ (CID) ಹಾಗೂ ಸ್ಥಳೀಯ ಪೊಲೀಸರು ತಮ್ಮ ಬಳಿಯಿರುವ ಎಲ್ಲಾ ಪ್ರಮುಖ ದಾಖಲೆಗಳನ್ನು 1 ವಾರದ ಒಳಗಾಗಿ ಹೊಸ ಎಸ್‌ಐಟಿ ತಂಡಕ್ಕೆ ಹಸ್ತಾಂತರಿಸಬೇಕು.

ಇದನ್ನೂ ಓದಿ: ಸೌಜನ್ಯ ಕೊಲೆ ಕೇಸ್: 3 ತಿಂಗಳಲ್ಲಿ ಹೊಸ ತಂಡದಿಂದ ಸ್ವತಂತ್ರ ತನಿಖೆಗೆ ಸುಪ್ರೀಂ ಆದೇಶ

ರಾಜ್ಯ ಸರ್ಕಾರವು ಈ ಎಸ್‌ಐಟಿ ತಂಡಕ್ಕೆ ತಕ್ಷಣವೇ ‘ಪೊಲೀಸ್ ಠಾಣೆ’ (Police Station Status) ಸ್ಥಾನಮಾನ ನೀಡಿ ಶೀಘ್ರವೇ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಜಾರಿ ನಿರ್ದೇಶನಾಲಯಕ್ಕೂ (Enforcement Directorate) ಅಗತ್ಯವಿರುವ ಸಹಕಾರ ಹಾಗೂ ಮಾಹಿತಿಯನ್ನು ನೀಡುವಂತೆ ಎಸ್‌ಐಟಿಗೆ ಕೋರ್ಟ್ ಸೂಚಿಸಿದೆ. ಎಸ್‌ಐಟಿಯ ಯಾವುದೇ ಹಂತದ ತನಿಖೆಗೆ ಯಾರೂ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *