ಬೆಂಗಳೂರು; ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ವಿಚಾರವಾಗಿ ಗ್ರಾಹಕರ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದೆ. ಮೊಸರಿನ ಬೆಲೆಯನ್ನು ಕನಿಷ್ಠ ₹2 ಇಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸೂಚನೆ ನೀಡಿದ್ದರೂ, ಅದಾಗಿ 20 ದಿನಗಳಿಗೂ ಹೆಚ್ಚು ಕಾಲ ಕಳೆದರೂ ಕರ್ನಾಟಕ ಹಾಲು ಮಹಾಮಂಡಳ (KMF) ಬೆಲೆ ಇಳಿಕೆಯನ್ನು ಜಾರಿಗೊಳಿಸಿಲ್ಲ.
ಲೀಟರ್ಗೆ ₹14 ಹೆಚ್ಚಳ – ಇನ್ನೂ ಜಾರಿಯಾಗದ ₹2 ಕಡಿತ:

ನವೆಂಬರ್ 1ರಿಂದ ಅನ್ವಯವಾಗುವಂತೆ ಹಾಲಿನ ಕೊಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಲೀಟರ್ಗೆ ₹8ರಿಂದ ₹14ರವರೆಗೆ ಬೆಲೆ ಏರಿಕೆ ಮಾಡಲಾಗಿತ್ತು. ಇದರ ಜೊತೆಗೆ ಮೊಸರಿನ ಬೆಲೆಯನ್ನು ಪ್ರತಿ ಲೀಟರ್ಗೆ ₹14 (₹54ರಿಂದ ₹68ಕ್ಕೆ) ಹಾಗೂ ಅರ್ಧ ಲೀಟರ್ಗೆ ₹6 (₹28ರಿಂದ ₹34ಕ್ಕೆ) ಹೆಚ್ಚಿಸಲಾಗಿತ್ತು.
ಭಾರೀ ಬೆಲೆ ಏರಿಕೆಗೆ ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಮೊಸರಿನ ಬೆಲೆಯನ್ನು ಕನಿಷ್ಠ ₹2 ಕಡಿತಗೊಳಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದರು. ಆದರೆ ಈವರೆಗೆ ಪರಿಷ್ಕೃತ ದರ ಜಾರಿಯಾಗಿಲ್ಲ.

ಇದನ್ನೂ ಓದಿ: ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣಿಕರಿಗೂ ಶೀಘ್ರವೇ ದರ ಏರಿಕೆ ಬಿಸಿ
ಗ್ರಾಹಕರ ಆಕ್ರೋಶ; ಕೆಎಂಎಫ್ ಆಡಳಿತಾಧಿಕಾರಿ ಹೇಳಿದ್ದೇನು?

ಬೆಲೆ ಕಡಿತದ ವಿಳಂಬಕ್ಕೆ ಗ್ರಾಹಕರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸೂಚನೆಗೂ ಇಲಾಖೆಗಳು ಹಾಗೂ ಅಧಿಕಾರಿಗಳು ಮಹತ್ವ ನೀಡುತ್ತಿಲ್ಲ ಎಂದು ದೂರಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ನಿತ್ಯ ಬಳಕೆಯ ಹಾಲು-ಮೊಸರಿನ ದರ ಇಳಿಸದೆ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂದು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ದರ ಕಡಿತ ವಿಳಂಬದ ಕುರಿತು ಪ್ರತಿಕ್ರಿಯಿಸಿರುವ ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್, ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಚರ್ಚೆ ನಡೆಯುತ್ತಿರುವುದರಿಂದ ತಡವಾಗಿದ್ದು, ಈವರೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

