ದೆಹಲಿ: ಪೂರ್ವ ದೆಹಲಿಯ ಪ್ರೀತ್ ವಿಹಾರ್ (Preet Vihar) ಪ್ರದೇಶದ ಕೆಫೆಯೊಂದರಲ್ಲಿ ಮಂಗಳವಾರ ನಸುಕಿನ ಜಾವ 22 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಫೆ ಬಾಗಿಲು ಮುಚ್ಚಿದ ಬಳಿಕ ತಡರಾತ್ರಿ ಪಾರ್ಟಿ ನಡೆಸುವ ನೆಪದಲ್ಲಿ ಈ ಹೇಯ ಕೃತ್ಯ ಎಸಗಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ರಾತ್ರಿ 11.30ಕ್ಕೆ ಬಂದ್ ಆದ ಕೆಫೆಯಲ್ಲಿ ನಸುಕಿನ 3.30ಕ್ಕೆ ನಡೆದಿದ್ದೇನು?

ಪೊಲೀಸ್ ಮಾಹಿತಿಯ ಪ್ರಕಾರ, ಎರಡು ಪ್ರತ್ಯೇಕ ಕೆಫೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ, ಆಕೆಯ ಸ್ನೇಹಿತರು ಮತ್ತು ಆರೋಪಿಗಳು ಕೆಫೆ ಮುಚ್ಚಿದ ಬಳಿಕ ಪಾರ್ಟಿ ಮಾಡಲು ಯೋಜಿಸಿದ್ದರು. ರಾತ್ರಿ 11.30ಕ್ಕೆ ಕೆಫೆ ಬಂದ್ ಆಗಿದ್ದರೂ, ಗುಂಪಿನಲ್ಲಿದ್ದ ಒಬ್ಬರ ಬಳಿ ಕೆಫೆಯ ಕೀ (ಬೀಗದ ಕೈ) ಇತ್ತು. ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರನ್ನೊಳಗೊಂಡ ಏಳು ಜನರ ತಂಡ ಮೊದಲು ಒಂದು ಕೆಫೆಯಲ್ಲಿ ಸೇರಿ ಬಳಿಕ ಮಂಡಾವಳಿಗೆ (Mandawali) ತೆರಳಿತ್ತು. ನಂತರ ನಸುಕಿನ 3 ಗಂಟೆ ಸುಮಾರಿಗೆ ಆರೋಪಿಗಳಲ್ಲೊಬ್ಬ ಕೆಲಸ ಮಾಡುತ್ತಿದ್ದ ಪ್ರೀತ್ ವಿಹಾರ್ನ ಮತ್ತೊಂದು ಕೆಫೆಗೆ ಎಲ್ಲರೂ ತಲುಪಿದ್ದರು.
ಕೆಫೆಯೊಳಗೆ ಏಳು ಮಂದಿಯೂ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ನಸುಕಿನ 3.30ರ ಸುಮಾರಿಗೆ ಇಬ್ಬರು ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಗುಂಪಿನಲ್ಲಿದ್ದ ಇತರರು ಈ ಕೃತ್ಯಕ್ಕೆ ನೆರವಾಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ವೇಳೆ ತಾನು ತಡವಾಗಿ ಮನೆಗೆ ಬರುವುದಾಗಿ ತಾಯಿಗೆ ಕರೆ ಮಾಡಿ ತಿಳಿಸಿದ್ದಾಗಿಯೂ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು
ಬೆಳಗ್ಗೆ 5.30ಕ್ಕೆ ದೂರು; ಇಬ್ಬರು ಮಹಿಳೆಯರ ಸಹಿತ ಮೂವರು ಅಂದರ್:

ಘಟನೆಯ ಬಳಿಕ ಗುಂಪಿನ ಸದಸ್ಯರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಬಳಿಕ ಸಂತ್ರಸ್ತ ಯುವತಿ ಬೆಳಗ್ಗೆ 5.30ರ ಸುಮಾರಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನನ್ನು ಬಂಧಿಸಲಾಗಿದೆ ಎಂದು ಪೂರ್ವ ದೆಹಲಿ ಉಪ ಪೊಲೀಸ್ ಆಯುಕ್ತ (DCP) ರಾಜೀವ್ ಕುಮಾರ್ ತಿಳಿಸಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

