ರಾಜ್ಯದಲ್ಲಿರುವುದು ನಾಗರಿಕ ಸರ್ಕಾರವೋ, ರಾಕ್ಷಸ ಸರ್ಕಾರವೋ?: ಬೈರಮಂಗಲ ರೈತರ ಮೇಲಿನ ಪೊಲೀಸ್ ದಬ್ಬಾಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ

ರಾಮನಗರ: ಬಿಡದಿ ಹೋಬಳಿಯ ಬೈರಮಂಗಲದಲ್ಲಿ ಜಮೀನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಕರ್ನಾಟಕದಲ್ಲಿ ನಾಗರಿಕ ಸರ್ಕಾರವಿದೆಯೋ ಅಥವಾ ರಾಕ್ಷಸ ಸರ್ಕಾರವಿದೆಯೋ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

“ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ, ಬಲಪ್ರಯೋಗದ ಮೂಲಕ ಅವರನ್ನು ಹತ್ತಿಕ್ಕಲು ಯತ್ನಿಸಿರುವ ದುಷ್ಪ್ರಯತ್ನ ಅತ್ಯಂತ ಖಂಡನೀಯ” ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ. “ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿ ಸಮೀಪದ ಬೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ದೈವದ್ರೋಹಕ್ಕೂ ಮೀರಿದ್ದು. ರೈತರು ಧರಣಿ ಕೂರಲು ಹಾಕಲೆತ್ನಿಸಿದ ಪೆಂಡಾಲ್ ಅನ್ನು ಕಿತ್ತುಕೊಂಡು, ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯವಾದದ್ದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಇರಾನ್ ಮೇಲೆ ಧ್ವಂಸಕಾರಿ ದಾಳಿಯ ಎಚ್ಚರಿಕೆ ನೀಡಿದ ಇಸ್ರೇಲ್: ವಿಶ್ವಸಂಸ್ಥೆಯಲ್ಲಿ ರಾಯಭಾರಿ ಡ್ಯಾನಿ ಡ್ಯಾನನ್ ಆಕ್ರೋಶ

“ರಾಜ್ಯ ಸರ್ಕಾರದ ಇಂತಹ ಅನ್ಯಾಯದ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿಯ ಭೂಮಿ ಇಂದು ‘ರಿಯಲ್ ಎಸ್ಟೇಟ್ ವ್ಯಾಪಾರಿ’ಯ ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, ಆ ‘ಹಿರಣ್ಯಾಕ್ಷ’ನ ಪಾಪದ ಕೊಡ ಈಗ ತುಂಬುತ್ತಿದೆ” ಎಂದು ಸಚಿವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *