ಬೆಂಗಳೂರು: “ಉಪ್ಪಿಗಿಂತ ರುಚಿಯಿಲ್ಲ” ಎಂಬ ಮಾತು ಭಾರತೀಯ ಅಡುಗೆಯಲ್ಲಿ ಸದಾ ಪ್ರಸಕ್ತ. ಆದರೆ ಅದೇ ಉಪ್ಪು ಇತ್ತೀಚಿನ ದಿನಗಳಲ್ಲಿ ಸೈಲೆಂಟ್ ಕಿಲ್ಲರ್ ಆಗಿ ಬದಲಾಗುತ್ತಿದೆ! ಹೌದು, ಭಾರತೀಯರಲ್ಲಿ ದಿನದಿಂದ ದಿನಕ್ಕೆ ಅತಿಯಾಗುತ್ತಿರುವ ಉಪ್ಪು ಹಾಗೂ ಸಕ್ಕರೆ ಸೇವನೆಯಿಂದಾಗಿ ಸಂಭವಿಸುತ್ತಿರುವ ಭೀಕರ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಅತ್ಯಂತ ಗಂಭೀರ ಹೆಜ್ಜೆಯಿಟ್ಟಿದೆ.
ಸಿಗರೇಟ್ ಪ್ಯಾಕೆಟ್ಗಳು ಮತ್ತು ಮದ್ಯದ ಬಾಟಲಿಗಳ ಮೇಲೆ ಇರುವಂತೆ, ಇನ್ಮುಂದೆ ಉಪ್ಪಿನ ಪ್ಯಾಕೆಟ್ಗಳ ಮೇಲೂ “ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ” ಎಂಬ ಎಚ್ಚರಿಕೆ ಲೇಬಲ್ ಅನ್ನು ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
WHO ಮಿತಿಗಿಂತ 3 ಪಟ್ಟು ಹೆಚ್ಚು ಉಪ್ಪು ತಿನ್ನುತ್ತಿದ್ದಾರೆ ಭಾರತೀಯರು!:
ವಿಶ್ವ ಆರೋಗ್ಯ ಸಂಸ್ಥೆಯ (WHO) ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಾರ, ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂ (ಸುಮಾರು ಒಂದು ಟೀ ಸ್ಪೂನ್) ಉಪ್ಪನ್ನು ಮಾತ್ರ ಸೇವಿಸಬೇಕು. ವರದಿಗಳ ಪ್ರಕಾರ, ಭಾರತೀಯರು ದಿನವೊಂದಕ್ಕೆ ಸರಾಸರಿ 10 ರಿಂದ 12 ಗ್ರಾಂ ಉಪ್ಪನ್ನು ಸೇವಿಸುತ್ತಿದ್ದಾರೆ. ಇದು ನಿಗದಿತ ಮಿತಿಗಿಂತ ಬರೋಬ್ಬರಿ 3 ಪಟ್ಟು ಹೆಚ್ಚಾಗಿದೆ. ಪಾನಿಪುರಿ, ಚೈನೀಸ್ ಫುಡ್, ಜಂಕ್ ಫುಡ್ ಹಾಗೂ ಸಂಸ್ಕರಿಸಿದ (Processed Food) ಆಹಾರ ಪದಾರ್ಥಗಳ ಬಳಕೆಯಿಂದಾಗಿ ಭಾರತದಲ್ಲಿ ಉಪ್ಪಿನ ಸೇವನೆಯ ಪ್ರಮಾಣ ಇತ್ತೀಚೆಗೆ ಶೇ. 15 ರಿಂದ 20 ರಷ್ಟು ಭಾರಿ ಏರಿಕೆ ಕಂಡಿದೆ.
ಕಳೆದ 3-4 ವರ್ಷಗಳಿಂದ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಪ್ರಕರಣಗಳು ಹಠಾತ್ ಹೆಚ್ಚಾಗಲು ಅತಿಯಾದ ಉಪ್ಪಿನ ಸೇವನೆಯೇ ಮುಖ್ಯ ಕಾರಣ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಉಪ್ಪು ರಕ್ತನಾಳಗಳನ್ನು ಗಟ್ಟಿಯಾಗಿಸಿ ಊತ ಉಂಟುಮಾಡುತ್ತದೆ. ಇದು ರಕ್ತದೊತ್ತಡ ಹೆಚ್ಚಿಸಿ (BP) ಹಾರ್ಟ್ ಅಟ್ಯಾಕ್ ಹಾಗೂ ಪಾರ್ಶ್ವವಾಯುವಿಗೆ (Stroke) ದಾರಿ ಮಾಡಿಕೊಡುತ್ತದೆ. ಸಕ್ಕರೆ ಮತ್ತು ಉಪ್ಪಿನ ಕಾಂಬಿನೇಷನ್ ರಕ್ತನಾಳ ಬ್ಲಾಕ್ ಮಾಡಿ ಸ್ಟೆಂಟ್ ಅಳವಡಿಸುವ ಪರಿಸ್ಥಿತಿ ತರುತ್ತದೆ. ಕಿಡ್ನಿ ವೈಫಲ್ಯ, ಲಿವರ್ ತೊಂದರೆ, ಎಲುಬುಗಳ ದೌರ್ಬಲ್ಯ (Osteoporosis), ಸ್ಥೂಲಕಾಯ ಹಾಗೂ ಚಿಕ್ಕ ಮಕ್ಕಳಲ್ಲಿ ಜೆನೆಟಿಕ್ ಸಮಸ್ಯೆಗಳಿಗೂ ಇದು ಕಾರಣವಾಗುತ್ತಿದೆ.
ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯ ವೈದ್ಯರ ಅಪರೂಪದ ಸಾಧನೆ: 3 ತಿಂಗಳ ಮಗುವಿನ ಯಕೃತ್ತಿನಲ್ಲಿದ್ದ ಕ್ಯಾನ್ಸರ್ ಗಡ್ಡೆ ಯಶಸ್ವಿ ತೆರವು
ಅಡುಗೆ ಮಾಡುವಾಗ ಅಂದಾಜಿನಲ್ಲಿ ಮುಷ್ಟಿಗಟ್ಟಲೆ ಉಪ್ಪು ಹಾಕುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಕರ್ನಾಟಕ ಆಹಾರ ಮತ್ತು ಆರೋಗ್ಯ ಇಲಾಖೆ ಜಂಟಿ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕರು ದಿನಕ್ಕೆ 6 ರಿಂದ 8 ಗ್ರಾಂ ಒಳಗಾಗಿ ಉಪ್ಪಿನ ಬಳಕೆ ಮಿತಿಗೊಳಿಸಬೇಕು. ಹೋಟೆಲ್ಗಳು, ರಸ್ತೆಬದಿಯ ಚಾಟ್ಸ್ ಅಂಗಡಿಗಳು, ಪಾನಿಪುರಿ ತಯಾರಕರು ಹಾಗೂ ಚೈನೀಸ್ ಫುಡ್ സെಂಟರ್ಗಳು ಕಡ್ಡಾಯವಾಗಿ ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕು. ಸಾರ್ವಜನಿಕರು ರುಚಿಗಿಂತ ಆರೋಗ್ಯಕ್ಕೆ ಆದ್ಯತೆ ನೀಡಿ, ಮಿತವಾಗಿ ಉಪ್ಪು ಬಳಸುವ ಮೂಲಕ ತಮ್ಮ ಜೀವನ ರಕ್ಷಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಕಳಕಳಿಯ ಮನವಿ ಮಾಡಿದೆ.

