ಸಕಲೇಶಪುರ: ಖಾಸಗಿ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡು ಸತಾಯಿಸುತ್ತಿದ್ದ ಯುವಕನ ಕಿರುಕುಳ ತಾಳಲಾರದೆ, ಮನನೊಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಹಾಗೂ ದಾರುಣ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೂಡು ಗ್ರಾಮದಲ್ಲಿ ಜರುಗಿದೆ.
ಬೆಳಗೂಡು ಗ್ರಾಮದ ನಿವಾಸಿ ಭವಿತಾ ಎಂಬುವವರ ಮಗಳು ಹಿಮಾ (21) ಮೃತಪಟ್ಟ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾರೆ.
ಶಾಲಾ ದಿನಗಳ ಪ್ರೀತಿ – ಬ್ರೇಕಪ್‌ಗೆ ಒಪ್ಪದ ಯುವಕನ ಕಿರುಕುಳ:
ಹಿಮಾ ಅವರು ಮಂಗಳೂರಿನ ಕರಾವಳಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದರು. ಈ ಹಿಂದೆ ಅರೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಗ ಬ್ಯಾಡನೆ ಗ್ರಾಮದ ನೌಶಾದ್ ಎಂಬಾತನ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹಿಮಾ ಮಂಗಳೂರಿನಲ್ಲಿದ್ದಾಗಲೂ ನೌಶಾದ್ ಅಲ್ಲಿಗೆ ಹೋಗಿ ಒಟ್ಟಿಗೆ ಸುತ್ತಾಡುತ್ತಿದ್ದನು.
ಇವರಿಬ್ಬರ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಾಗ, “ತಂದೆ-ತಾಯಿಗೆ ತೊಂದರೆ ಕೊಡಬಾರದು. ನೌಶಾದ್ ನನ್ನು ಪ್ರೀತಿಸಬೇಡ, ಚನ್ನಾಗಿ ಓದು” ಎಂದು ಕುಟುಂಬಸ್ಥರು ಬುದ್ಧಿಮಾತು ಹೇಳಿದ್ದರು. ಮನೆಯವರ ಮಾತಿಗೆ ಗೌರವ ನೀಡಿ, “ನಮ್ಮ ಪ್ರೀತಿಯನ್ನು ಇಲ್ಲಿಗೆ ನಿಲ್ಲಿಸಿ ಬಿಡೋಣ, ಚೆನ್ನಾಗಿ ಓದೋಣ” ಎಂದು ಹಿಮಾ ನೌಶಾದ್‌ಗೆ ತಿಳಿಸಿದ್ದರು.
ಹಿಮಾ ಪ್ರೀತಿಯನ್ನು ನಿಲ್ಲಿಸಲು ಹೇಳಿದ್ದಕ್ಕೆ ಆಕ್ರೋಶಗೊಂಡ ನೌಶಾದ್ ಜಗಳವಾಡಿದ್ದಲ್ಲದೆ, ಆಕೆಯೊಂದಿಗೆ ಕೈ ಹಿಡಿದು ಸುತ್ತಾಡಿದ ಕೆಲವೊಂದು ಖಾಸಗಿ ಫೋಟೋಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದನು. ಅಲ್ಲದೆ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು.
ಇದನ್ನೂ ಓದಿ: ಯುವತಿಯ ಮದುವೆ ವಿಚಾರದಲ್ಲಿ ಜಗಳ, ದೂರು-ಪ್ರತಿದೂರು ದಾಖಲು
ಚಿಕಿತ್ಸೆ ಫಲಕಾರಿಯಾಗದೆ ಹಿಮ್ಸ್ ఆಸ್ಪತ್ರೆಯಲ್ಲಿ ಸಾವು:
ಫೋಟೋಗಳನ್ನು ಡಿಲೀಟ್ ಮಾಡುವಂತೆ ಹಿಮಾ ಎಷ್ಟು ಮನವಿ ಮಾಡಿದರೂ ಕೇಳದೆ ನೌಶಾದ್ ಸತಾಯಿಸುತ್ತಿದ್ದ ಪರಿಣಾಮ ಆಕೆ ತೀವ್ರ ಮನನೊಂದಿದ್ದಳು. ಕಳೆದ ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಿಮಾ ಮನೆಯಲ್ಲಿದ್ದ ಕಳೆನಾಶಕ (ವಿಷ) ಸೇವಿಸಿ ಅಸ್ವಸ್ಥಗೊಂಡಿದ್ದಳು. ತಕ್ಷಣ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಹಿಮ್ಸ್ (HIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಆಕೆ ಕೊನೆಯುಸಿರೆಳೆದಿದ್ದಾಳೆ.
ತಮ್ಮ ಮಗಳ ಸಾವಿಗೆ ಹಾಗೂ ಆಕೆ ವಿಷ ಸೇವಿಸಲು ನೌಶಾದ್ ನೀಡಿದ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಮೃತರ ತಾಯಿ ಭವಿತಾ ಅವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನೌಶಾದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

