ಕಡಬದಲ್ಲಿ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಕುಖ್ಯಾತ ಕಳ್ಳ ಕೋರ್ಟ್‌ಗೆ ಶರಣು

ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರತ್ಯೇಕ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 5 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬ ಕೊನೆಗೂ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗಿದ್ದಾನೆ.ಶರಣಾದ ಆರೋಪಿಯನ್ನು ಮಹಾರಾಷ್ಟ್ರ ಮೂಲದ ವಿಶಾಲ್ ಪೋಂಕೆ (30) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ 

ವಿಶಾಲ್ ಪೋಂಕೆ ವಿರುದ್ಧ 2016ರಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ನಾಲ್ಕು ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದ ಸಹ-ಆರೋಪಿಗಳಾದ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು, ಮಹಾರಾಷ್ಟ್ರದ ವಿಜಯ್ ಸುರೇಶ್ ಪೋಂಕೆ, ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯದ ಪ್ರಕಾಶ್ ಬಹದ್ದೂರ್ ಎಂಬುವವರಿಗೆ ಪುತ್ತೂರಿನ ACJ ಮತ್ತು JMFC ನ್ಯಾಯಾಲಯವು ಈಗಾಗಲೇ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ನಡುವೆ ವಿಶಾಲ್ ಪೋಂಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 5 ವರ್ಷಗಳಿಂದ ನಾಪತ್ತೆಯಾಗಿದ್ದನು. ಪೊಲೀಸರು ಆತನ ಪತ್ತೆಗೆ ಹುಡುಕಾಟ ನಡೆಸಿದ್ದು, ನ್ಯಾಯಾಲಯವು ಆತನ ವಿರುದ್ಧ ಉದ್ಘೋಷಣೆ  ಜಾರಿಗೊಳಿಸಿತ್ತು.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು

ನ್ಯಾಯಾಂಗ ಬಂಧನಕ್ಕೆ ರವಾನೆ:

ಅಕ್ಟೋಬರ್ 30ರಂದು ಆರೋಪಿ ವಿಶಾಲ್ ಪೋಂಕೆ ಪುತ್ತೂರಿನ 2ನೇ ACJ ಮತ್ತು JMFC (ಸಂಚಾರಿ ನ್ಯಾಯಾಲಯ, ಕಡಬ) ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಆದೇಶಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ