ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ ಹೈಡ್ರಾಮಾ: ‘HDK ನಿವಾಸದಲ್ಲೇ ಮೊಬೈಲ್‌ ಎಕ್ಸ್‌ಚೇಂಜ್’ ಎಂದ ಕಮಿಷನರ್; “ನನ್ನನ್ನ ಯಾರೂ ಟಚ್ ಮಾಡೋಕಾಗಲ್ಲ” ಎಂದು ಕುಮಾರಸ್ವಾಮಿ ಸವಾಲು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸಲಾದ ಬಹುವಿವಾದಿತ ‘ಸ್ಟಿಂಗ್ ಆಪರೇಷನ್’ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್‌ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. ಸಿದ್ದರಾಮಯ್ಯ ಅವರಿಗೆ ಸಿಸಿಬಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ, ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸ ಹಾಗೂ ಆಪ್ತರ ಲಿಂಕ್ ಬೆನ್ನತ್ತಿರುವ ಪೊಲೀಸರು, ತನಿಖೆಯ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

“ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಮೊಬೈಲ್ ಹಸ್ತಾಂತರ”: ಪೊಲೀಸ್ ಆಯುಕ್ತರ ಹೇಳಿಕೆ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,  “ಪ್ರಕರಣದ ಆರೋಪಿ ರಿತೇಶ್ ಪಾಂಡೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ವಿಳಾಸದಲ್ಲಿದ್ದ. ಪ್ರಜ್ವಲ್ ಪ್ರಸಾದ್ ಸೂಚನೆಯಂತೆ ವಿಡಿಯೋ ಅಪ್‌ಲೋಡ್ ಆಗಿದ್ದು, ಕುಮಾರಸ್ವಾಮಿ ಅವರ ನಿವಾಸದಲ್ಲೇ ಮೊಬೈಲ್ ಎಕ್ಸ್‌ಚೇಂಜ್ (ಹಸ್ತಾಂತರ) ಆಗಿದೆ.” ರಿತೀಶ್ ಪಾಂಡೆ ಹಾಗೂ ಪ್ರಜ್ವಲ್ ಪ್ರಸಾದ್‌ಗೆ ಹಣ ವರ್ಗಾವಣೆ ಆಗಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಇವರ ಹೇಳಿಕೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

“ನನ್ನ ಭವಿಷ್ಯ ಯಾವತ್ತೂ ಸುಳ್ಳಾಗಲ್ಲ, ಇನ್ನು ಪಿಕ್ಚರ್ ಬಾಕಿ ಇದೆ!”: ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಕಮಿಷನರ್ ಹೇಳಿಕೆಯ ಬೆನ್ನಲ್ಲೇ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.  “ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಸಾಕ್ಷ್ಯಗಳಿದ್ದರೆ ಕಾನೂನಿನ ಮುಂದೆ ಹಾಜರಾಗಿ ಉತ್ತರ ನೀಡಬೇಕು. ತನಿಖೆ ನಡೆಸಿದಾಗ ಸತ್ಯ ಹೊರಬಂದಿದೆ. ಕುಮಾರಸ್ವಾಮಿ ಅವರ ಕಡೆಯವರ ಹೆಸರು ಬಂದ ತಕ್ಷಣ ತನಿಖೆಗೆ ಹಾಜರಾಗದೆ ಯಾಕೆ ಮುಂಜಾಗ್ರತಾ ಜಾಮೀನಿಗೆ (Anticipatory Bail) ಓಡಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

 “ನನ್ನ ಭವಿಷ್ಯವಾಣಿ ಯಾವತ್ತೂ ಸುಳ್ಳಾಗುವುದಿಲ್ಲ. ನಾಳೆ ಮತ್ತೆ ಪ್ರಿಯಾಂಕ್ ಖರ್ಗೆ ತಲೆಹಾಕ್ತಿದ್ದಾರೆ, ದಲಿತ-ಬಲಿತ ಅಂತ ಅದೇ ರಾಗ ಹಾಡ್ತಾರೆ ಹೊರತು, ಸಿಕ್ಕಿಬಿದ್ದಿರುವ ರಿತೇಶ್ ಶರ್ಮಾ, ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಸದ್ಯಕ್ಕೆ ಇದು ಕೇವಲ ಟ್ರೇಲರ್, ‘ಅಭಿ ಪಿಕ್ಚರ್ ಭಾಕಿ ಹೈ'” ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

ಇದನ್ನೂ ಓದಿ: ‘ಸ್ಟಿಂಗ್ ವಿಡಿಯೋ’ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿಯಿಂದ ‘ಕ್ಲೀನ್ ಚಿಟ್’

“ಯಾರೀ‌ ಆ ಕಮಿಷನರ್? ಹೆಡ್‌ಕ್ಲರ್ಕ್‌ಗಿಂತ ಕಡೆಯಾಗಿದ್ದಾರೆ!”: ಎಚ್.ಡಿ. ಕುಮಾರಸ್ವಾಮಿ ಗರಂ

ಪೋಲಿಸ್ ಆಯುಕ್ತರು ಹಾಗೂ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಹಿರಂಗ ಸವಾಲೆಸೆದಿದ್ದಾರೆ. “ಯಾರೀ ಕಮಿಷನರ್? ತಂಗೊಡುವ ಜಾಗ ಉಳಿಸಿಕೊಳ್ಳಲು ಹೆಡ್‌ಕ್ಲರ್ಕ್‌ಗಿಂತ ಕಡೆಯಾಗಿ ಕಮಿಷನರ್ ಹೇಳಿಕೆ ನೀಡುತ್ತಿದ್ದಾರೆ. ಅವರು ಯಾರ ಹಂಗಿನಲ್ಲಿದ್ದು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.”

“ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಯಾರೂ ಟಚ್ ಮಾಡುವುದಕ್ಕೂ ಆಗಲ್ಲ. ನಾಳೆ (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಪಿಕ್ಚರ್ ಬಾಕಿ ಇದೆ ಎನ್ನುವವರಿಗೆ ನಾಳೆ ಬನ್ನಿ, ನಾನೇ ಅಸಲಿ ಪಿಕ್ಚರ್ ತೋರಿಸುತ್ತೇನೆ! ಈ ಸ್ಟಿಂಗ್ ಆಪರೇಷನ್ ಅವರ ಮೇಲೆಯೇ ತಿರುಗುಬಾಣವಾಗಲಿದೆ,” ಎಂದು ಎಚ್‌ಡಿಕೆ ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ