Breaking News

ನಿನ್ನನ್ನು ಇಲ್ಲೇ ಕೊಂದು ಹಾಕುತ್ತೇನೆ: ಸಿಎಂ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ!

Threat to a female officer in CM Siddaramaiah's Varuna constituency

ಮೈಸೂರು: ಚಿಕ್ಕಬಳ್ಳಾಪುರದಲ್ಲಿ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಯೊಬ್ಬರಿಗೆ ʼನಿನ್ನನ್ನು ಇಲ್ಲೇ ಕೊಂದು ಹಾಕುತ್ತೇನೆʼ ಎಂದು ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿಡಿಯೋ ವೈರಲ್‌ ಆಗುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಸರ್ಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಯಲ್ಲಿದ್ದ ಗ್ರಾಮ ಆಡಳಿತಾಧಿಕಾರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಘಟನೆ 2025ರ ಡಿ.31, 2025 ರಂದು ಬೆಳಗ್ಗೆ 11:10ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪಿಸಲು ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದ ಸರ್ವೆ ನಂ. 8, 60 ಮತ್ತು 68 ರಲ್ಲಿ ಒಟ್ಟು 20 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಹಸ್ತಾಂತರಿಸಲು ಗ್ರಾಮ ಆಡಳಿತಾಧಿಕಾರಿ ಭವ್ಯ .ಜಿ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದಾಗ ಬೆದರಿಕೆ ಹಾಕಲಾಗಿದೆ.

ಇದನ್ನೂ ಓದಿ: ಸರಿಯಾಗಿ ಬಟ್ಟೆ ಹಾಕು ಎಂದ ಮಹಿಳಾ ಹೋಮ್‌ಗಾರ್ಡ್‌ಗೆ ಥಳಿಸಿದ ಯುವತಿ!

ಜಮೀನು ಪರಿಶೀಲನೆ ವೇಳೆ ಸ್ಥಳಕ್ಕೆ ನುಗ್ಗಿದ ಗುಡಮಾದನಹಳ್ಳಿ ನಿವಾಸಿ ಜಿ.ಎಂ ಪುಟ್ಟಸ್ವಾಮಿ ಎಂಬವರು ಭವ್ಯ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ‘ಯಾರನ್ನು ಕೇಳಿ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ನಿಮ್ಮ ತಹಶೀಲ್ದಾರ್ ತಲೆಯನ್ನು ತೆಗೆಯಬೇಕು ಹಾಗೂ ನಿನ್ನನ್ನೂ ಇಲ್ಲೇ ಕೊಂದು ಹಾಕುತ್ತೇನೆ’ ಎಂದು ಜೀವ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಲಾಗಿದೆ. ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಹೋದ ಗ್ರಾಮ ಸಹಾಯಕ ನವೀನ್‌ ಕುಮಾರ್‌ ಅವರನ್ನೂ ತಳ್ಳಲಾಗಿದೆ.

ಘಟನೆಯ ದೃಶ್ಯಗಳನ್ನು ನವೀನ್‌ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಕ್ಷಿ ನಾಶಗೊಳಿಸಲು ಬಲವಂತವಾಗಿ ಮೊಬೈಲ್‌ ಕಸಿದುಕೊಂಡು ರಘು ಎಂಬವರಿಗೆ ನೀಡಿ ವಿಡಿಯೋ ಡಿಲಿಟ್‌ ಮಾಡಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ: ಆರ್‌.ಅಶೋಕ ಆಕ್ರೋಶ

ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ವರುಣಾದಲ್ಲಿ ನಡೆದ ಪ್ರಕರಣದ ಬಗ್ಗೆ ಎಕ್ಸ್‌ ಪೋಸ್ಟ್‌ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ, ರಾಜ್ಯದಲ್ಲಿ ಜಂಗಲ್‌ ರಾಜ್‌ ತಲೆ ಎತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ದುಷ್ಟ ಅಪರಾಧಿಗಳಿಗೆ ಅಭಯ, ಕಾಂಗ್ರೆಸ್ ಅಲಿಖಿತ ನಿಯಮ: ಬಿಜೆಪಿ ವಾಗ್ದಾಳಿ

“ಶಿಡ್ಲಘಟ್ಟದ ಪೌರಾಯುಕ್ತೆಯ ಮೇಲೆ ನಿಂದನೆ, ಬೆದರಿಕೆ ಪ್ರಕರಣ ಬೆನ್ನಲ್ಲೇ ಈಗ ಸಿಎಂ ಸಿದ್ದರಾಂಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮೇಲೆ ನಿಂದನೆ ನಡೆಸಿ, ಜೀವ ಬೆದರಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ಬಳಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣ ನಿಟ್ಟಿನಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗಾಗಿ ತೆರಳಿದ್ದ ಭವ್ಯ ಎಂಬ ಮಹಿಳಾ ಅಧಿಕಾರಿ ವಿರುದ್ಧ ಸ್ಥಳೀಯ ಪುಡಾರಿಯೊಬ್ಬ ಜಗಳ ಆರಂಭಿಸಿ ಕೊಲೆ ಬೆದರಿಕೆ ಒಡ್ಡಿರುವ ಆಘಾತಕಾರಿ ಘಟನೆಯಿಂದ ರಾಜ್ಯದಲ್ಲಿ ಈಗಾಗಲೇ ಕುಸಿದಿರುವ ಅಧಿಕಾರಿಗಳ ಮನೋಬಲವನ್ನ ಮತ್ತಷ್ಟು ಕುಗ್ಗಿಸುವ ಅಪಾಯ ಎದುರಾಗಿದೆ” ಎಂದು ಬರೆದುಕೊಂಡಿದ್ದಾರೆ.

“ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ “ಜಂಗಲ್ ರಾಜ್” ತಲೆ ಎದ್ದಿದ್ದು, ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.

ಬಿವೈ ವಿಜಯೇಂದ್ರ ಆಕ್ರೋಶ

ವರುಣಾದಲ್ಲಿ ಇಂತಹ ಘಟನೆಗಳು ಹೊಸತಲ್ಲ. ಈ ಹಿಂದೆಯೂ ಇಂತಹ ಪುಂಡಾಟಿಗಳು ನಡೆದಿವೆ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೊಲೀಸ್‌ ಅಧಿಕಾರಿಯ ಮೇಲೆ ಕೈ ಮಾಡಲು ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆ ಬಗ್ಗೆ ನೆನಪಿಸಿಕೊಂಡರು.

ಸ್ವತಃ ಮುಖ್ಯಮಂತ್ರಿಯವರೇ ಬೆಳಗಾವಿಯಲ್ಲಿ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾಗಿದ್ದರು. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರು ಮಹಿಳಾ ಅಧಿಕಾರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳ ಮೇಲೆ ದರ್ಪ ತೋರುವ ಮೂಲಕ ಸರ್ಕಾರದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದರು.

ಠಾಣೆ ಮೆಟ್ಟಿಲೇರಿದ ಮಹಿಳಾ ಅಧಿಕಾರಿ

ಘಟನೆ ಸಂಬಂಧ ಭವ್ಯ ಅವರು ವರುಣಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸರ್ಕಾರಿ ಕೆಲಸವನ್ನು ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟಾಗಿದೆ ಎಂದು ದೂರಿನಲ್ಲಿ ಭೀತಿ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪುಟ್ಟಸ್ವಾಮಿ ವಿರುದ್ಧ ದೌರ್ಜನ್ಯ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು