ಬೆಂಗಳೂರು: ರಾಜ್ಯದಲ್ಲಿ ಪದವಿ ಪೂರ್ವ (ಪಿಯುಸಿ) ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಹಾಗೂ ಶಾಲಾ ಶಿಕ್ಷಣ ಇಲಾಖೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. 2027ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಪಿಯು ಕಾಲೇಜುಗಳ ಪ್ರಥಮ ಪಿಯುಸಿ (1st PUC) ವಾರ್ಷಿಕ ಪರೀಕ್ಷೆಗೆ ರಾಜ್ಯಮಟ್ಟದಲ್ಲಿ ತಯಾರಿಸಿದ ಏಕರೂಪದ ಪ್ರಶ್ನೆಪತ್ರಿಕೆಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಪ್ರಶ್ನೆಪತ್ರಿಕೆ ಇರಲಿದೆ. ಈ ಪ್ರಶ್ನೆಪತ್ರಿಕೆಯನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ (KSEAB) ಸಿದ್ಧಪಡಿಸಲಿದೆ. ಪರೀಕ್ಷಾ ದಿನದಂದು KSEAB ಮಂಡಳಿಯಿಂದ ನೇರವಾಗಿ ಕಾಲೇಜುಗಳಿಗೆ ಡಿಜಿಟಲ್ ರೂಪದಲ್ಲಿ (Digital Format) ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿಕೊಡಲಾಗುತ್ತದೆ.

ಪರೀಕ್ಷೆಯನ್ನು ನಡೆಸುವ ಪೂರ್ಣ ಜವಾಬ್ದಾರಿ KSEAB ಮಂಡಳಿಗೆ ಇರುವುದಿಲ್ಲ. ಬದಲಿಗೆ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನೇತೃತ್ವದಲ್ಲೇ ಆಯಾ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರಾಯೋಗಿಕ ಪರೀಕ್ಷೆಗಳು ಮುಂಚಿನಂತೆಯೇ ಜಿಲ್ಲಾಮಟ್ಟದಲ್ಲೇ ನಡೆಯಲಿದ್ದು, ಜಿಲ್ಲಾಮಟ್ಟದ ವೇಳಾಪಟ್ಟಿಯಂತೆ ಆಯೋಜನೆಗೊಳ್ಳಲಿವೆ. ಪ್ರಶ್ನೆಪತ್ರಿಕೆ ರಾಜ್ಯಮಟ್ಟದ್ದಾಗಿದ್ದರೂ, ಉತ್ತರಪತ್ರಿಕೆಗಳ ಮೌಲ್ಯಮಾಪನ (Evaluation) ಆಯಾ ಕಾಲೇಜುಗಳ ಹಂತದಲ್ಲೇ ನಡೆಯಲಿದೆ.

ಕಾಲೇಜುಗಳು ಫಲಿತಾಂಶ ಪ್ರಕಟಿಸುವ ಮುನ್ನ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (DDPU) ಪರಿಶೀಲನೆಗೆ ಒಳಪಡಿಸಬೇಕು. ಜಿಲ್ಲಾ ಉಪನಿರ್ದೇಶಕರ ಅಂತಿಮ ಅನುಮೋದನೆ ದೊರೆತ ನಂತರವಷ್ಟೇ ಫಲಿತಾಂಶ ಪ್ರಕಟಿಸಲು ಅವಕಾಶವಿರುತ್ತದೆ. ಪ್ರಥಮ ಪಿಯುಸಿ ಹಂತದಲ್ಲೇ ಶಿಕ್ಷಣದ ಗುಣಮಟ್ಟವನ್ನು ಸೂಕ್ತವಾಗಿ ಪರಿಶೀಲಿಸಲು ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಜ್ಜುಗೊಳಿಸಲು ಈ ಕ್ರಾಂತಿಕಾರಿ ವ್ಯವಸ್ಥೆ ನೆರವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


