ಫುಟ್ಬಾಲ್ ಜಗತ್ತಿನ ದಿಗ್ಗಜ ಆಟಗಾರ, ಜೆರ್ಸಿ ನಂ.7 ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗೆ ನಿವೃತ್ತಿ ಘೋಷಿಸಿದ್ದಾರೆ.
ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿರುವ ರೊನಾಲ್ಡೊ, ತಮ್ಮ ಅಸಾಧಾರಣ ಗೋಲು ಗಳಿಕೆ, ದಾಖಲೆಗಳು ಮತ್ತು ನಾಯಕತ್ವದ ಮೂಲಕ ವಿಶ್ವ ಫುಟ್ಬಾಲ್ನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. 2003ರ ಆಗಸ್ಟ್ 20ರಂದು ಕಝಾಕಿಸ್ತಾನ್ ವಿರುದ್ಧ ಅಂತರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ್ದ ಅವರು, ಗ್ರೀಸ್ ವಿರುದ್ಧ ಯುರೋ 2004 ಟೂರ್ನಿಯಲ್ಲಿ ತಮ್ಮ ಮೊದಲ ಅಂತರಾಷ್ಟ್ರೀಯ ಗೋಲು ದಾಖಲಿಸಿದ್ದರು.

23 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ
ರೊನಾಲ್ಡೊ ತಮ್ಮ ನಿವೃತ್ತಿ ಸಂದೇಶದಲ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಮಾತುಗಳನ್ನು ಹೇಳಿದ್ದಾರೆ. “ಪೋರ್ಚುಗಲ್ ಜನರೇ, ನಮ್ಮ ರಾಷ್ಟ್ರೀಯ ತಂಡದ ನಂ.7 ಜೆರ್ಸಿಯನ್ನು ಹಸ್ತಾಂತರಿಸುವ ಸಮಯ ಬಂದಿದೆ. ಈ ಜೆರ್ಸಿ ಎಂದಿಗೂ ನನ್ನೊಬ್ಬನಿಗೆ ಮಾತ್ರ ಸೇರಿದ್ದಲ್ಲ. ಆದರೆ 23 ವರ್ಷಗಳ ಕಾಲ ಅದನ್ನು ಧರಿಸುವ, ರಕ್ಷಿಸುವ ಮತ್ತು ಜಗತ್ತಿನ ವಿವಿಧ ಕ್ರೀಡಾಂಗಣಗಳಲ್ಲಿ ಪ್ರತಿನಿಧಿಸುವ ಗೌರವ ಹಾಗೂ ಜವಾಬ್ದಾರಿ ನನಗೆ ಸಿಕ್ಕಿತ್ತು” ಎಂದು ಹೇಳಿದ್ದಾರೆ.

ರೊನಾಲ್ಡೊ ಅವರ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 234 ಪಂದ್ಯಗಳನ್ನು ಆಡಿದ್ದು, 146 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಪುರುಷರ ಅಂತರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹಾಗೂ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಅಲ್ಲದೆ, 10 ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಎರಡು ಪಂದ್ಯಗಳಲ್ಲಿ ತಲಾ ನಾಲ್ಕು ಗೋಲುಗಳನ್ನು ಬಾರಿಸಿದ್ದಾರೆ.
ಆರು ವಿಶ್ವಕಪ್ಗಳಲ್ಲಿ ಗೋಲು, ಯುರೋ ಕಪ್ ಗೆಲುವಿನ ಸಾಧನೆ

ವಿಶ್ವಕಪ್ ಇತಿಹಾಸದಲ್ಲಿ ಆರು ಆವೃತ್ತಿಗಳಲ್ಲಿ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ರೊನಾಲ್ಡೊ ಅವರದ್ದು. 2006, 2010, 2014, 2018, 2022 ಮತ್ತು 2026ರ ವಿಶ್ವಕಪ್ಗಳಲ್ಲಿ ಅವರು ಗೋಲು ಗಳಿಸಿದ್ದಾರೆ. ವಿಶ್ವಕಪ್ನಲ್ಲಿ ಒಟ್ಟು 11 ಗೋಲುಗಳನ್ನು ದಾಖಲಿಸಿದ್ದಾರೆ.
ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ಆರು ಆವೃತ್ತಿಗಳಲ್ಲಿ ಭಾಗವಹಿಸಿ 14 ಗೋಲುಗಳನ್ನು ಗಳಿಸಿರುವ ಅವರು, ಈ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರಾಗಿದ್ದಾರೆ.
2016ರಲ್ಲಿ ಪೋರ್ಚುಗಲ್ ತಂಡವನ್ನು ನಾಯಕನಾಗಿ ಮುನ್ನಡೆಸಿ ದೇಶಕ್ಕೆ ಮೊದಲ ಯುರೋಪಿಯನ್ ಚಾಂಪಿಯನ್ಶಿಪ್ ಪ್ರಶಸ್ತಿ ತಂದುಕೊಟ್ಟಿದ್ದು ಅವರ ವೃತ್ತಿಜೀವನದ ಪ್ರಮುಖ ಮೈಲಿಗಲ್ಲು. 2019 ಮತ್ತು 2025ರಲ್ಲಿ UEFA ನೇಷನ್ಸ್ ಲೀಗ್ ಪ್ರಶಸ್ತಿ ಗೆದ್ದ ತಂಡದಲ್ಲೂ ರೊನಾಲ್ಡೊ ಪ್ರಮುಖ ಪಾತ್ರ ವಹಿಸಿದ್ದರು.

