ಬೆಂಗಳೂರು: ರಾಜಧಾನಿ ಬೆಂಗಳೂರನ್ನು ನಡುಗಿಸಿರುವ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣದ ರೂವಾರಿ, ಕ್ಯಾಬ್ ಚಾಲಕ ಇಂದುಶೇಖರ್ನ ಅಸಲಿ ಮುಖ ಮತ್ತು ಆತನ ಹಿಂಸಾತ್ಮಕ ಹಿನ್ನೆಲೆ ಇದೀಗ ಬಯಲಾಗಿದೆ. ಅತ್ಯಂತ ಒರಟು ಸ್ವಭಾವದವನಾಗಿದ್ದ ಈತ, ಸದಾ ನೆರೆಹೊರೆಯವರೊಂದಿಗೆ ಜಗಳವಾಡುತ್ತಾ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಎಂದು ಕಟ್ಟಡದ ಬಾಡಿಗೆದಾರರು ಹಾಗೂ ಸ್ಥಳೀಯ ನಿವಾಸಿಗಳು ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ (The New Indian Express) ಜೊತೆ ಮಾತನಾಡಿದ ಇಂದುಶೇಖರ್ ವಾಸವಿದ್ದ ಕಟ್ಟಡದ ನಿವಾಸಿಗಳು ಹಾಗೂ ಸುತ್ತಮುತ್ತಲ ಅಂಗಡಿಯವರು ಆರೋಪಿಯ ಕುಕೃತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಪಾರ್ಕಿಂಗ್ ಸೇರಿದಂತೆ ಅತ್ಯಂತ ಸಣ್ಣಪುಟ್ಟ ವಿಚಾರಗಳಿಗೂ ಇಂದುಶೇಖರ್ ಸ್ಥಳೀಯರೊಂದಿಗೆ ಜಗಳಕ್ಕೆ ಇಳಿಯುತ್ತಿದ್ದ. ಜನರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಶಾಂತಿ ಸೃಷ್ಟಿಸುತ್ತಿದ್ದ. ಈತನ ವರ್ತನೆಗೆ ಹೆದರಿ ಬಿಲ್ಡಿಂಗ್ನ ಇತರ ಬಾಡಿಗೆದಾರರು ಆತನೊಂದಿಗೆ ಸಂಪರ್ಕವನ್ನೇ ಇಟ್ಟುಕೊಳ್ಳುತ್ತಿರಲಿಲ್ಲ.

ತಾನು ಮಾಧ್ಯಮದವನು ಎಂದು ಹೇಳಿಕೊಂಡು ಇಂದುಶೇಖರ್ ಜನರಿಗೆ ಬೆದರಿಕೆ ಹಾಕುತ್ತಿದ್ದ. ಈತ ಯಾರೊಂದಿಗಾದರೂ ಗಲಾಟೆ ಮಾಡುವಾಗಲೆಲ್ಲಾ ಈತನ ಮಗಳು ಅದನ್ನು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಟ್ಟಡದ ಮಾಲೀಕರ ಮಗನೊಂದಿಗೆ ಸ್ನೇಹದಿಂದಿದ್ದ ಇಂದುಶೇಖರ್, 2ನೇ ಮಹಡಿಯಲ್ಲಿ ನವೀಕರಣ ಕಾಮಗಾರಿ ನಡೆಸಲು ಜಿಬಿಎ (GBA) ಅನುಮತಿ ಅಗತ್ಯವಿದೆ ಎಂಬ ನೆಪದಲ್ಲಿ ಕೆಲವು ದಾಖಲೆಗಳಿಗೆ ಸಹಿ ಪಡೆದು ವಂಚಿಸಿದ್ದ. ಈ ವಿಚಾರವಾಗಿ ಸದ್ಯ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ವಿಚಾರಣಾ ಹಂತದಲ್ಲಿದೆ.
ರಾಜಾಜಿನಗರದ 5ನೇ ಬ್ಲಾಕ್ನಲ್ಲಿರುವ ವಾಣಿಜ್ಯ ಕಟ್ಟಡದ ಎರಡನೇ ಮಹಡಿಯಲ್ಲಿ ಇಂದುಶೇಖರ್ ಕಳೆದ 14 ವರ್ಷಗಳಿಂದ ಕುಟುಂಬ ಸಮೇತ ವಾಸವಾಗಿದ್ದ. ಕಟ್ಟಡದ ನೆಲಮಹಡಿಯಲ್ಲಿ 5 ಅಂಗಡಿಗಳು ಹಾಗೂ ಮೊದಲ ಮಹಡಿಯಲ್ಲಿ ರಾಜಕೀಯ ಪಕ್ಷವೊಂದರ ಕಚೇರಿಯಿದೆ. ಸುತ್ತಮುತ್ತ ಭಾರಿ ಜನನಿಬಿಡ ಪ್ರದೇಶವಿದ್ದರೂ, ಮನೆಯೊಳಗೆ ಏಳು ಮಂದಿಯ ಭೀಕರ ಹತ್ಯೆ ನಡೆದಾಗ ಯಾವುದೇ ಕಿರುಚಾಟ ಅಥವಾ ಅಸಹಜ ಚಟುವಟಿಕೆಗಳು ಯಾರಿಗೂ ಕೇಳಿಸಿಲ್ಲ ಅಥವಾ ಗಮನಕ್ಕೆ ಬಂದಿಲ್ಲ. ಕಳೆದ ಎರಡು ದಿನಗಳಿಂದ ಪೊಲೀಸರು ಕಟ್ಟಡಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದರೂ ಹತ್ಯೆಯ ಬಗ್ಗೆ ಯಾರಿಗೂ ಸುಳಿವು ನೀಡಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕವೇ ಇಷ್ಟೊಂದು ದೊಡ್ಡ ಮಟ್ಟದ ನರಮೇಧ ನಡೆದಿದೆ ಎಂಬ ಸತ್ಯ ತಿಳಿದು ನೆರೆಹೊರೆಯವರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಗರ್ಭಿಣಿ ಬೆಕ್ಕಿನ ಅಪಹರಣ ಮಾಡಿದ 9 ಜನರ ವಿರುದ್ಧ FIR!
ಮಗಳನ್ನು ಬ್ರೈನ್ ವಾಶ್ ಮಾಡಿ ಈ ಭೀಕರ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಕಮಿಷನರ್ ಹೇಳಿಕೆ ನೀಡಿದ್ದು, ಪ್ರಕರಣ ಸಂಬಂಧ ಬಂಧಿತನಾಗಿರುವ ಇಂದುಶೇಖರ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


