ಸೇನಾ ಮೆರಿಟ್ ಪಟ್ಟಿಯಲ್ಲಿ ರ‍್ಯಾಂಕ್ ಪಡೆದರೂ ಕಿಡ್ನಿ ಗಾತ್ರದ ಕಾರಣಕ್ಕೆ ಅನರ್ಹ: ಮರು ವೈದ್ಯಕೀಯ ಪರೀಕ್ಷೆಗೆ ಕೋರಿದ್ದ ಅಭ್ಯರ್ಥಿಯ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಭಾರತೀಯ ಸೇನೆಯ ನೇಮಕಾತಿ ಪರೀಕ್ಷೆಯ ಮೆರಿಟ್ ಪಟ್ಟಿಯಲ್ಲಿ 51ನೇ ರ‍್ಯಾಂಕ್ ಗಳಿಸಿದ್ದರೂ, ಎಡಭಾಗದ ಮೂತ್ರಪಿಂಡದ ಗಾತ್ರ ಚಿಕ್ಕದಾಗಿದೆ ಎಂಬ ಕಾರಣಕ್ಕೆ ವೈದ್ಯಕೀಯವಾಗಿ ಅನರ್ಹಗೊಂಡಿದ್ದ 25 ವರ್ಷದ ಯುವಕನ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮರು ಪರೀಕ್ಷೆಗಾಗಿ ‘ಪರಿಶೀಲನಾ ವೈದ್ಯಕೀಯ ಮಂಡಳಿ’ ರಚಿಸುವಂತೆ ಕೋರಿ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ  ಅವರಿದ್ದ ವಿಭಾಗೀಯ ಪೀಠವು ಎತ್ತಿಹಿಡಿದಿದೆ.

ಮೋನಿಶ್ ಎನ್. ಆರಾಧ್ಯ (25) ಎಂಬುವವರು ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಗೆ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆಯಲ್ಲಿ 51ನೇ ರ‍್ಯಾಂಕ್ ಪಡೆದಿದ್ದರು. ಬಳಿಕ ವಿಶೇಷ ವೈದ್ಯಕೀಯ ಮಂಡಳಿ (SNB) ನಡೆಸಿದ ಪರೀಕ್ಷೆಯಲ್ಲಿ ಅವರ ಎಡ ಕಿಡ್ನಿ ಗಾತ್ರ ಚಿಕ್ಕದಾಗಿದೆ ಎಂಬ ಕಾರಣಕ್ಕೆ ಅನರ್ಹಗೊಳಿಸಲಾಗಿತ್ತು. ಜುಲೈನಲ್ಲಿ ಮೇಲ್ಮನವಿ ವೈದ್ಯಕೀಯ ಮಂಡಳಿ (AMB) ಮರು ಪರೀಕ್ಷೆ ನಡೆಸಿ ಅದೇ ಕಾರಣ ನೀಡಿ ಅನರ್ಹತೆಯನ್ನು ದೃಢಪಡಿಸಿತ್ತು. ಆಗಸ್ಟ್ 10ರಂದು RMB ಮೂಲಕ ಮರುಪರಿಶೀಲನೆಗೆ ಆರಾಧ್ಯ ಸಲ್ಲಿಸಿದ್ದ ಮನವಿಯನ್ನೂ ತಿರಸ್ಕರಿಸಲಾಗಿತ್ತು. ಸೆಪ್ಟೆಂಬರ್ 17ರಂದು ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿ, “RMB ಮೂಲಕ ಮರುಪರಿಶೀಲನೆ ಕೋರುವುದು ಅಭ್ಯರ್ಥಿಯ ಹಕ್ಕಲ್ಲ. ಭಾರತೀಯ ಸೇನಾ ಸಿಬ್ಬಂದಿ ನಿರ್ವಹಿಸಬೇಕಾದ ಕಠಿಣ ಕರ್ತವ್ಯದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯದ ವಿಶೇಷ ವಿವೇಚನಾ ಅಧಿಕಾರವನ್ನು ಬಳಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿತ್ತು.

Advertisement

ಇದನ್ನೂ ಓದಿ: ಹೆಂಡತಿಯನ್ನು ಮನೆಕೆಲಸ ಹಾಗೂ ಪೋಷಕರ ಆರೈಕೆಗೆ ಪತಿಯು ಆಜ್ಞಾಪಿಸುವಂತಿಲ್ಲ”: ಕರ್ನಾಟಕ ಹೈಕೋರ್ಟ್ ಆದೇಶ

ಮಣಿಪಾಲ್ ಆಸ್ಪತ್ರೆ ವರದಿ vs ಸೇನೆಯ ‘ಟ್ರಿಪಲ್ ಫೇಸ್ CECT ಸ್ಕ್ಯಾನ್’: ನ್ಯಾಯಾಲಯ ಹೇಳಿದ್ದೇನು?

ವಿಭಾಗೀಯ ಪೀಠದ ವಿಚಾರಣೆಯ ವೇಳೆ ವೈದ್ಯಕೀಯ ವರದಿಗಳ ಕುರಿತು ಮಹತ್ವದ ವಾದ-ಪ್ರತಿವಾದ ನಡೆಯಿತು. ಅರ್ಜಿದಾರರ ಪರ ವಕೀಲ ಕೆ.ಎಸ್. ಪೊನ್ನಪ್ಪ ವಾದ ಮಂಡಿಸಿ, ಮಣಿಪಾಲ್ ಆಸ್ಪತ್ರೆ ಸೇರಿದಂತೆ ವಿವಿಧ ಡಯಾಗ್ನೋಸ್ಟಿಕ್ ಕೇಂದ್ರಗಳ ವರದಿಯಲ್ಲಿ ಆರಾಧ್ಯ ಅವರ ಎಡ ಕಿಡ್ನಿ ಗಾತ್ರ 7.7 ರಿಂದ 8 ಸೆಂ.ಮೀ. ಇದೆ ಎಂದು ತಿಳಿಸಲಾಗಿದೆ ಎಂದರು. (ಸೇನಾ ವೈದ್ಯಕೀಯ ಮಾನದಂಡದ ಪ್ರಕಾರ, ಅಲ್ಟ್ರಾಸೌಂಡ್‌ನಲ್ಲಿ ಕಿಡ್ನಿ ಗಾತ್ರ 8 ಸೆಂ.ಮೀ.ಗಿಂತ ಕಡಿಮೆ ಇದ್ದರೆ ಅನರ್ಹಗೊಳಿಸಲಾಗುತ್ತದೆ).

Advertisement

ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅರವಿಂದ್ ಕಾಮತ್ ವಾದ ಮಂಡಿಸಿ, “ಮೇಲ್ಮನವಿ ವೈದ್ಯಕೀಯ ಮಂಡಳಿಯು (AMB) ಅಲ್ಟ್ರಾಸೌಂಡ್‌ಗಿಂತಲೂ ಅತ್ಯಂತ ನಿಖರ ಫಲಿತಾಂಶ ನೀಡುವ ಸುಧಾರಿತ ‘ಟ್ರಿಪಲ್ ಫೇಸ್ ಸಿಇಸಿಟಿ ಸ್ಕ್ಯಾನ್’ (Triple Phase CECT Scan) ಮೂಲಕ ಪರೀಕ್ಷೆ ನಡೆಸಿದೆ. ಆ ವರದಿಯಲ್ಲಿ ಅರ್ಜಿದಾರರ ಎಡ ಕಿಡ್ನಿ ಗಾತ್ರ 7 ಸೆಂ.ಮೀ. ಇರುವುದು ದೃಢಪಟ್ಟಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವಾದ ಆಲಿಸಿದ ವಿಭಾಗೀಯ ಪೀಠವು (ಅಕ್ಟೋಬರ್ 29ರ ಆದೇಶ), “ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದ ತಾಂತ್ರಿಕ ನಿರ್ಧಾರವನ್ನು ನ್ಯಾಯಾಲಯವು ಮರುಪರಿಶೀಲಿಸಲು ಸಾಧ್ಯವಿಲ್ಲ. ‘ಟ್ರಿಪಲ್ ಫೇಸ್ CECT ಸ್ಕ್ಯಾನ್’ ವರದಿಯಲ್ಲಿ ಎಡ ಕಿಡ್ನಿ 7 ಸೆಂ.ಮೀ. ಇರುವುದು ಕಂಡುಬಂದಿರುವುದರಿಂದ, RMB ಪರಿಶೀಲನೆ ನಿರಾಕರಿಸಿದ ಸಕ್ಷಮ ಪ್ರಾಧಿಕಾರದ ನಿರ್ಧಾರವನ್ನು ಏಕಪಕ್ಷೀಯ ಅಥವಾ ಕಾರಣರಹಿತ ಎಂದು ಹೇಳಲಾಗದು” ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement